ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ‘ಲೋಕಾಯುಕ್ತ ಎಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಎಂ.ಚಂದ್ರಶೇಖರ್ ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕಿದ್ದಲ್ಲದೇ, ಮಾಧ್ಯಮಗಳ ಮುಖಾಂತರ ತನ್ನ ಕಕ್ಷಿದಾರ ಹಾಗೂ ಲೋಕಾಯುಕ್ತದ ಮರ್ಯಾದೆಗೆ ಎಚ್.ಡಿ.ಕುಮಾರಸ್ವಾಮಿ ಧಕ್ಕೆ ಉಂಟು ಮಾಡಿದ್ದಾರೆ. ಹಾಗಾಗಿ, ರಾಜಿ ಸಂಧಾನದ ಪ್ರಕ್ರಿಯೆಗೆ ಮೊದಲು ಅವರು ಕೋರ್ಟ್‌ಗೆ ಲಿಖಿತ ವಿವರಣೆ ನೀಡಲಿ’ ಎಂದು ಚಂದ್ರಶೇಖರ್ ಪರ ವಕೀಲರು ಹೈಕೋರ್ಟ್‌ಗೆ ಅರುಹಿದರು.
ಎಂ.ಚಂದ್ರಶೇಖರ್ ಅವರಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ, ‘ನಮ್ಮ ವಿರುದ್ಧ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಅರ್ ರದ್ದುಪಡಿಸಬೇಕು’ ಎಂದು ಕೋರಿ ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮತ್ತು ಸುರೇಶ್ ಬಾಬು ಸಲ್ಲಿಸಿರುವ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಚಂದ್ರಶೇಖರ್ ಪರ ಹೈಕೋರ್ಟ್ ವಕೀಲ ಎಂ.ಎಚ್.ಹಿದಾಯತ್ ಉಲ್ಲಾ, ‘ಕುಮಾರಸ್ವಾಮಿ ಅವರು ಲಿಖಿತ ವಿವರಣೆ ನೀಡಲಿ. ನಂತರ ನಮ್ಮ ಕಕ್ಷಿದಾರರು ಅದನ್ನು ಪರ್ಯಾಲೋಚಿಸಿ ಮುಂದಡಿ ಇಡಲಿದ್ದಾರೆ’ ಎಂದರು.
ಕುಮಾರಸ್ವಾಮಿ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಹಷ್ಮತ್ ಪಾಷ, ‘ರಾಜಿ ಪ್ರಕ್ರಿಯೆಗೆ ನಾವು ತಯಾರಿದ್ದು, ಮುಂದಿನದನ್ನು ಕೋರ್ಟ್ ನಿರ್ಧಾರಕ್ಕೆ ಬಿಡಲು ಸಿದ್ಧರಿದ್ದೇವೆ’ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಇಬ್ಬರೂ ಕುಳಿತು ಪರಸ್ಪರ ಚರ್ಚಿಸಿ ನಂತರ ಒಂದು ತೀರ್ಮಾನಕ್ಕೆ ಬನ್ನಿ. ನಂತರ ಕೋರ್ಟ್ ತನ್ನ ವಿವೇಚನಾಯುಕ್ತ ನಿರ್ಧಾರ ಪ್ರಕಟಿಸಲಿದೆ’ ಎಂದು ವಿಚಾರಣೆಯನ್ನು ಮಾರ್ಚ್ 5ಕ್ಕೆ ಮುಂದೂಡಿತು.
ದೂರು: ‘ಕುಮಾರ ಸ್ವಾಮಿ ನನ್ನ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದ್ದಾರೆ’ ಎಂದು ಆರೋಪಿಸಿ ಚಂದ್ರಶೇಖರ್, ಸಂಜಯನಗರ ಪೊಲೀಸ್ ಠಾಣೆಯಲ್ಲಿ 2024ರಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಭಾರತೀಯ ನ್ಯಾಯ ಸಂಹಿತಾ–2023ರ (ಬಿಎನ್‌ಎಸ್) ಕಲಂ 224 (ಸರ್ಕಾರಿ ನೌಕರರಿಗೆ ಅವರ ಅಧಿಕೃತ ಕರ್ತವ್ಯಗಳ ಮೇಲೆ ಪ್ರಭಾವ ಬೀರಲು ಬೆದರಿಕೆ ಹಾಕಿದ) ಆರೋಪದಡಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.