ಬೆಂಗಳೂರು: ಕಾಂಗ್ರೆಸ್ ನಾಯಕರ ಪರಿಸ್ಥಿತಿಯು ಬಿ.ಎಸ್. ಯಡಿಯೂರಪ್ಪ ಅವರ ಮುಂದಿನ ನಡೆ ಮೇಲೆ ಅವಲಂಬಿತವಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಮಾತನಾಡಿದ ಅವರು,ಯಡಿಯೂರಪ್ಪ ಮುಂದೆ ಏನು ಮಾಡುತ್ತಾರೆ ಎಂಬ ಅಂದಾ ಜಿನ ಮೇಲೆ ಕಾಂಗ್ರೆಸ್ ನಾಯಕರು ನಡೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಬೇರೆ ಪಕ್ಷ ಕಟ್ಟಿದ್ದರು. ಆ ದಿನದ ಬಳಿಕ ಏನೇನಾಯಿತು ಎಂಬುದನ್ನು ಪರಿಗಣಿಸಿ ಕಾಂಗ್ರೆಸ್ ನಾಯಕರು ಲೆಕ್ಕಾಚಾರ ಹಾಕಿದ್ದಾರೆ. ಆ ಪಕ್ಷದ ಆಂತರಿಕ ಪರಿಸ್ಥಿತಿ ಏನೆಂಬುದು ಗೊತ್ತಿದೆ ಎಂದರು.
‘ಅಧಿಕಾರ ಹಿಡಿಯಬೇಕೆಂಬ ತವಕದಲ್ಲಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ದೊಡ್ಡ ದೊಡ್ಡ ಸಮೀಕ್ಷೆ ನಡೆಸುವ ಕಂಪನಿಗಳ ಜತೆ ಸೇರಿಕೊಂಡು, ಜನಾಭಿಪ್ರಾಯ ತಿರುಚುವ ಕೆಲಸ ಮಾಡುತ್ತಿವೆ. ರಾಷ್ಟ್ರೀಯ ಪಕ್ಷಗಳ ಪರಿಸ್ಥಿತಿ ಬಗ್ಗೆ ಮಾಧ್ಯಮಗಳ ವರದಿಗಳೇ ಎಲ್ಲವನ್ನೂ ಹೇಳುತ್ತಿವೆ. ನಮಗೆ ಯಾವುದೇ ಆತಂಕ ಇಲ್ಲ’ ಎಂದರು.
‘ಜೆಡಿಎಸ್‌ನ ಕೆಲವು ಶಾಸಕರು ಸಿದ್ದರಾಮಯ್ಯ ಅವರ ಸಂಪರ್ಕದಲ್ಲಿ ಇದ್ದಾರೆ ಎಂಬ ಚರ್ಚೆ ಇದೆಯಲ್ಲ’ ಎಂಬ ಪ್ರಶ್ನೆಗೆ, ಕೆಲವರು ಅವರ ವಿಶ್ವಾಸದಲ್ಲಿ ಇರಬಹುದು. ಆದರೆ ಅವರಲ್ಲೇ ಗೊಂದಲ ಇದೆ. ಆಷಾಢ ಮಾಸದ ನಂತರ ಅದು ಹೊರ ಬರುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.