ADVERTISEMENT

ಮುಡಾಗೆ ಸಿ.ಎಂ ಪತ್ನಿ ಒತ್ತಾಯ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2024, 16:10 IST
Last Updated 23 ಆಗಸ್ಟ್ 2024, 16:10 IST
<div class="paragraphs"><p>ಎಚ್‌ಡಿಕೆ</p></div>

ಎಚ್‌ಡಿಕೆ

   

ಬೆಂಗಳೂರು: ‘ಸಿದ್ದರಾಮಯ್ಯ ಅವರು ಮುಡಾ ನಿವೇಶನ ಹಂಚಿಕೆಯಲ್ಲಿ ತಮ್ಮ ಮತ್ತು ತಮ್ಮ ಕುಟುಂಬದವರ ಪಾತ್ರ ಇಲ್ಲ ಎಂದು ಹೇಳುತ್ತಾರೆ. ಆದರೆ ಅವರ ಪತ್ನಿ ಮುಡಾ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರು ಎಂಬುದನ್ನು ದಾಖಲೆಗಳು ಹೇಳುತ್ತವೆ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಮುಡಾ ಸಭೆಯ ನಡಾವಳಿಗೆ ಸಂಬಂಧಿಸಿದ ದಾಖಲೆ ಪತ್ರವೊಂದರ ಚಿತ್ರವನ್ನು ಕುಮಾರಸ್ವಾಮಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ADVERTISEMENT

‘ಕೆಸರೆ ಗ್ರಾಮದ ಸರ್ವೆ ಸಂಖ್ಯೆ 463ರ 3 ಎಕರೆ 16 ಗುಂಟೆ ಜಮೀನನ್ನು ಭೂಸ್ವಾಧೀನದಿಂದ ಸರ್ಕಾರವು ಕೈಬಿಟ್ಟಿತ್ತು. ಆದರೆ ಇತರೆ ಜಮೀನುಗಳನ್ನು ಅಭಿವೃದ್ಧಿಪಡಿಸುವಾಗ, ಈ ಜಮೀನನ್ನೂ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ನಿವೇಶನ, ರಸ್ತೆ, ಉದ್ಯಾನ ಅಭಿವೃದ್ಧಿಪಡಿಸಿ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿರುತ್ತದೆ’ ಎಂದು ಮುಡಾದ ದಾಖಲೆಯಲ್ಲಿ ವಿವರಿಸಲಾಗಿದೆ.

‘ತಮಗೆ ಸೇರಿದ ಜಮೀನಿನಲ್ಲಿ ಈಗಾಗಲೇ ಬಡಾವಣೆ ರಚಿಸಿ, ನಿವೇಶನ ಹಂಚಿರುವುದರಿಂದ ಅದರ ಬದಲಿಗೆ ಸಮಾನಾಂತರ ಬಡಾವಣೆಯಲ್ಲಿ ಅಷ್ಟೇ ವಿಸ್ತೀರ್ಣದ ನಿವೇಶನ ನೀಡುವಂತೆ ಕೋರಿ ಪಾರ್ವತಿ ಅವರು 2014ರ ಮಾರ್ಚ್‌ 23ರಂದು ಮನವಿ ಸಲ್ಲಿಸಿದ್ದರು. ಅವರಿಗೆ ಮಾರುಕಟ್ಟೆ ದರದಲ್ಲಿ ಜಮೀನಿನ ಪರಿಹಾರ ಅಥವಾ 40:60ರ ಅನುಪಾತದಲ್ಲಿ ನಿವೇಶನ ನೀಡುವುದಾಗಿ ಪ್ರಾಧಿಕಾರ ತಿಳಿಸಿತ್ತು. ಆದರೆ ಅದಕ್ಕೆ ಒಪ್ಪದ ಅವರು, ಬದಲಿ ಜಮೀನು ನೀಡುವಂತೆ ಒತ್ತಾಯಿಸಿದ್ದರು’ ಎನ್ನುತ್ತದೆ ದಾಖಲೆ.

ಪೋಸ್ಟ್‌ನಲ್ಲಿ ಇದನ್ನು ಉಲ್ಲೇಖಿಸಿರುವ ಕುಮಾರಸ್ವಾಮಿ, ‘ಪಾರ್ವತಿ ಅವರು 2014ರಲ್ಲಿ ಹೀಗೆ ಒತ್ತಾಯಿಸಿದಾಗ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಸಿದ್ದರಾಮಯ್ಯಗೆ ಕನ್ನಡ ಬರುತ್ತದೆ. ದಾಖಲೆಯಲ್ಲಿ ಏನಿದೆ ಎಂಬುದನ್ನು ಓದಿಕೊಳ್ಳಲಿ. ಇದು ಟಿಪ್ಪಣಿಯೋ ಅಥವಾ ಅಪ್ಪಣೆಯೋ ಎಂಬುದನ್ನು ಅವರೇ ಹೇಳಲಿ’ ಎಂದು ಸವಾಲು ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.