ADVERTISEMENT

ಸದಾನಂದಗೌಡರಂತೆ ಪ್ರತಿಯೊಂದಕ್ಕೂ ಹಲ್ಲು ಬಿಡುವುದಿಲ್ಲ: ಕುಮಾರಸ್ವಾಮಿ ತಿರುಗೇಟು

ಅಳುವುದು ನಮ್ಮ ಕುಟುಂಬದ ಪೇಟೆಂಟ್: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 16:57 IST
Last Updated 28 ನವೆಂಬರ್ 2019, 16:57 IST
   

ಮೈಸೂರು: ‘ನನಗೆ ವಿಕ್ಸ್‌, ಗ್ಲಿಸರಿನ್‌ ಹಚ್ಚಿಕೊಂಡು ಅಳಲು ಬರುವುದಿಲ್ಲ. ಬಡವರ ಕಷ್ಟ ಕಂಡಾಗ ಕಣ್ಣೀರು ಸುರಿಸುತ್ತೇನೆ. ಹೌದು. ಕಣ್ಣೀರು ನಮ್ಮ ಕುಟುಂಬದ ಪೇಟೆಂಟ್‌. ಇದು ಡ್ರಾಮಾ ಕಣ್ಣೀರಲ್ಲ. ಸದಾನಂದ ಗೌಡರ ತರಹ ಪ್ರತಿಯೊಂದಕ್ಕೂ ಹಲ್ಲು ಬಿಟ್ಟುಕೊಂಡು ನಿಲ್ಲುವವ ನಾನಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಗುರುವಾರ ತಿರುಗೇಟು ನೀಡಿದರು.

‘ಕಣ್ಣೀರು ಹಾಕುವುದು ದೇವೇಗೌಡ ಕುಟುಂಬದ ಹುಟ್ಟುಗುಣ’ ಎಂಬ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಜನರ ನೋವನ್ನು ಅರ್ಥಮಾಡಿಕೊಂಡಿರುವವ ನಾನು. ನಿಮ್ಮಿಂದ ಏನನ್ನೂ ಕಲಿಯಬೇಕಾಗಿಲ್ಲ. ಜನರಿಗಾಗಿ ನಾನು ಕಣ್ಣೀರು ಹಾಕುತ್ತೇನೆ. ನಿಮಗೆ ಹೃದಯವೇ ಇಲ್ಲ. ಆದ್ದರಿಂದ ಕಣ್ಣೀರು ಸುರಿಸಲು ನಿಮಗೆ ಗ್ಲಿಸರಿನ್‌ ಬೇಕು’ ಎಂದು ವಾಗ್ದಾಳಿ ನಡೆಸಿದರು.

‘ನನ್ನ ಹಾಗೂ ಗ್ರಾಮೀಣ ಭಾಗದ ಜನರ ಸಂಬಂಧವೇ ಬೇರೆ. ಬಿಜೆಪಿಯವರ ಅಜೆಂಡಾನೇ ಬೇರೆ. ಸದಾನಂದ ಗೌಡ ಅಥವಾ ಬಿಜೆಪಿಯವರನ್ನು ಮೆಚ್ಚಿಸಲು ನಾನು ಬದುಕಿಲ್ಲ. ನಾಚಿಕೆಯಾಗಬೇಕು ನಿಮಗೆ’ ಎಂದು ಪ್ರತ್ಯುತ್ತರ ಕೊಟ್ಟರು.

ADVERTISEMENT

ಅವರಂತೆ ರಾಸಲೀಲೆಗೆ ಬಳಸಿಲ್ಲ:‘ಕುಮಾರಸ್ವಾಮಿ ಅವರನ್ನು ನೋಡಲು ಹೋಟೆಲ್‌ ಮುಂದೆ ಕಾಯಬೇಕಾಗಿತ್ತು’ ಎಂಬ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್‌.ವಿಶ್ವನಾಥ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ನಾನು ಹೋಟೆಲ್‌ ನಲ್ಲಿ ಕೊಠಡಿ ಪಡೆದಿದ್ದು ವಿಶ್ರಾಂತಿಗಾಗಿಯೇ ಹೊರತು ಬಿಜೆಪಿಯವರಂತೆ ರಾಸಲೀಲೆ ನಡೆಸಲು ಅಲ್ಲ’ ಎಂದು ಹರಿಹಾಯ್ದರು.

‘ಅರವಿಂದ ಲಿಂಬಾವಳಿ ಏನು ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು’ ಎಂದು ಕುಟುಕಿದ ಅವರು, ‘ನಾನು ಸರ್ಕಾರದಿಂದ ಮನೆ ತೆಗೆದುಕೊಂಡಿರಲಿಲ್ಲ. ಜೆಪಿ ನಗರದ ಮನೆ ವಿಧಾನಸೌಧದಿಂದ ದೂರ ಇದೆ. ಮಧ್ಯಾಹ್ನದ ವಿಶ್ರಾಂತಿಗಾಗಿ ಹೋಟೆಲ್‌ನಲ್ಲಿ ಕೊಠಡಿ ಮಾಡಿದ್ದು ಹೌದು’ ಎಂದರು.

‘ಈ ವಯಸ್ಸಿಗೆ ಮರ್ಯಾದೆಯಿಂದ ಮಾತನಾಡುವುದನ್ನು ಕಲಿತುಕೊಳ್ಳುವಂತೆ ವಿಶ್ವನಾಥ್‌ಗೆ ಹೇಳಲು ಬಯಸುತ್ತೇನೆ. ಬೇರೆಯವರ ಜತೆ ಆಟವಾಡಿದ ರೀತಿ ನನ್ನಲ್ಲಿ ಆಟವಾಡಬೇಡಿ’ ಎಂದು ಎಚ್ಚರಿಕೆ ಕೊಟ್ಟರು.

‘ವಿಶ್ವನಾಥ್‌ 10 ಸಲ ನನ್ನ ಮನೆಗೆ ಬಂದು ತಿಂಡಿ ತಿಂದು ಹೋಗಿದ್ದಾರೆ. ಹುಣಸೂರಿನ ಅಭಿವೃದ್ಧಿಯ ವಿಚಾರ ಮಾಡನಾಡಲು ಬಂದಿರಲಿಲ್ಲ. ಸಾರಿಗೆ ಇಲಾಖೆಯ ಸ್ಕ್ರ್ಯಾಪ್‌ ವಸ್ತುಗಳನ್ನು ಖರೀದಿಸುವ ಏಜೆಂಟ್‌ ಜತೆ ಅರ್ಜಿ ಹಿಡಿದುಕೊಂಡು ಬಂದಿದ್ದರು’ ಎಂದರು.

ಉಪಚುನಾವಣೆ ಫಲಿತಾಂಶ ಹೊರ ಬಂದ ನಂತರ ರಾಜಕೀಯ ಶುದ್ಧೀಕರಣವಾಗುವುದು ಖಂಡಿತ. ಮಹಾರಾಷ್ಟ್ರದ ಮಾದರಿಯಲ್ಲಿ ಇಲ್ಲೂ ಬದಲಾವಣೆ ಆಗುವುದು ನಿಶ್ಚಿತ
-ಎಚ್‌.ಡಿ. ಕುಮಾರಸ್ವಾಮಿ
ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.