ADVERTISEMENT

ಡ್ರಗ್ಸ್ ಜಾಲಕ್ಕೆ ಹೆಡ್‌ ಕಾನ್‌ಸ್ಟೆಬಲ್ ಸಹಕಾರ

ಆರೋಪಿಗಳಿಗೆ ತನಿಖೆ ಮಾಹಿತಿ ನೀಡುತ್ತಿದ್ದ ಪ್ರಭಾಕರ್ ಸೇವೆಯಿಂದ ಅಮಾನತು

ಸಂತೋಷ ಜಿಗಳಿಕೊಪ್ಪ
Published 12 ನವೆಂಬರ್ 2020, 21:15 IST
Last Updated 12 ನವೆಂಬರ್ 2020, 21:15 IST
ದರ್ಶನ್
ದರ್ಶನ್   

ಬೆಂಗಳೂರು: ಡಾರ್ಕ್‌ನೆಟ್ ಮೂಲಕ ಡ್ರಗ್ಸ್ ತರಿಸಿಕೊಂಡು ರಾಜ್ಯದಲ್ಲಿ ಮಾರಾಟ ಮಾಡುತ್ತಿದ್ದ ಜಾಲಕ್ಕೆ ಹೆಡ್‌ ಕಾನ್‌ಸ್ಟೆಬಲ್‌ ಪ್ರಭಾಕರ್ ಎಂಬುವರು ಸಹಕಾರ ನೀಡುತ್ತಿದ್ದ ಸಂಗತಿ ತನಿಖೆಯಿಂದ ಬಯಲಾಗಿದ್ದು, ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಅಂಚೆ ಮೂಲಕ ಡ್ರಗ್ಸ್ ಸಾಗಣೆ ಹಾಗೂ ಮಾರಾಟ ಮಾಡುತ್ತಿದ್ದ ಬಗ್ಗೆ ಕೆಂಪೇಗೌಡ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 500 ಗ್ರಾಂ ಹೈಡ್ರೊ ಗಾಂಜಾ ಸಮೇತ ಸುಜಯ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ತಲೆಮರೆಸಿಕೊಂಡಿದ್ದ ಆರೋಪಿಗಳಾದ ಹೇಮಂತ್, ಸುನೇಶ್ ಅವರನ್ನು ಗೋವಾದಲ್ಲಿ ಸಿಸಿಬಿ ಪೊಲೀಸರು ಸೆರೆ ಹಿಡಿದಿದ್ದರು.

ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ಮಾಜಿ ಸಚಿವ, ಕಾಂಗ್ರೆಸ್‌ನ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಅವರನ್ನೂ ಸೆರೆ ಹಿಡಿಯಲಾಗಿತ್ತು. ಇದೀಗ ನಾಲ್ವರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ದಿನಕ್ಕೊಂದು ಮಾಹಿತಿ ಹೊರಬೀಳುತ್ತಿದೆ.

ADVERTISEMENT

‘ಆರೋಪಿಗಳು ಹಲವು ವರ್ಷಗಳಿಂದ ಡ್ರಗ್ಸ್ ಮಾರಾಟ ಮಾಡುತ್ತಿದ್ದಕ್ಕೆ ಪುರಾವೆಗಳು ಸಿಕ್ಕಿವೆ. ಸದಾಶಿವನಗರ ಠಾಣೆಯ ಹೆಡ್‌ ಕಾನ್‌ಸ್ಟೆಬಲ್ ಪ್ರಭಾಕರ್ ಈ ಆರೋಪಿಗಳ ವಿರುದ್ಧ ನಡೆಯುತ್ತಿದ್ದ ಪೊಲೀಸರ ತನಿಖೆ ಬಗ್ಗೆ ಮಾಹಿತಿ ನೀಡುತ್ತಿದ್ದರು. ಅದರಿಂದಲೇ ಆರೋಪಿಗಳು, ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದರು’ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಜಯ್ ಬಂಧನವಾಗುತ್ತಿದ್ದಂತೆ ಆರೋಪಿಗಳಾದ ಹೇಮಂತ್ ಹಾಗೂ ಸುನೇಶ್ ತಲೆಮರೆಸಿಕೊಂಡಿದ್ದರು. ದರ್ಶನ್ ಲಮಾಣಿ ಜೊತೆ ಸೇರಿ ಗೋವಾಕ್ಕೆ ಹೋಗಿದ್ದರು. ಅವರ ಬಂಧನಕ್ಕಾಗಿ ಪೊಲೀಸರು, ಮೊಬೈಲ್‌ ಕರೆಗಳ ವಿವರ ಹಾಗೂ ಮೊಬೈಲ್ ನೆಟ್‌ವರ್ಕ್‌ ಮಾಹಿತಿ ಕಲೆಹಾಕುತ್ತಿದ್ದರು. ಇದರ ಮಾಹಿತಿಯನ್ನು ಪ್ರಭಾಕರ್, ಆರೋಪಿಗಳಿಗೆ ತಿಳಿಸುತ್ತಿದ್ದ. ಅದರ ನೆರವಿನಿಂದಲೇ ಆರೋಪಿಗಳು ಸ್ಥಳ ಬದಲಾವಣೆ ಮಾಡುತ್ತಿದ್ದರು.’

‘ಬಂಧಿತ ಆರೋಪಿಗಳ ಮೊಬೈಲ್ ಕರೆಗಳ ವಿವರ ಪರಿಶೀಲಿಸಿದಾಗ, ಹೆಡ್‌ ಕಾನ್‌ಸ್ಟೆಬಲ್ ಕರೆ ಮಾಡುತ್ತಿದ್ದ ವಿಷಯ ಗೊತ್ತಾಗಿತ್ತು. ಆ ಬಗ್ಗೆ ಪ್ರಕರಣದ ತನಿಖಾಧಿಕಾರಿ, ಡಿಸಿಪಿ ಮೂಲಕ ನಗರ ಪೊಲೀಸ್ ಕಮಿಷನರ್ ಅವರಿಗೆ ವರದಿ ಸಲ್ಲಿಸಿದ್ದರು. ಕಮಿಷನರ್ ಮೂಲಕ ಬಂದ ವರದಿ ಪರಿಶೀಲಿಸಿದ್ದ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್. ಅನುಚೇತ್, ಹೆಡ್ ಕಾನ್‌ಸ್ಟೇಬಲ್ ಪ್ರಭಾಕರ್‌ ಅವರನ್ನು ಅಮಾನತು ಮಾಡಿದ್ದಾರೆ’ ಎಂದೂ ಅಧಿಕಾರಿ ವಿವರಿಸಿದರು.

‘ಆರೋಪಿ ಹೇಮಂತ್‌ ಹಾಗೂ ಸುಜಯ್ ಅವರೇ ಹೆಡ್‌ ಕಾನ್‌ಸ್ಟೆಬಲ್ ಪ್ರಭಾಕರ್ ಜೊತೆ ಸಂಪರ್ಕದಲ್ಲಿದ್ದರು. ಅದಕ್ಕಾಗಿ ಅವರು ಹಣವನ್ನೂ ನೀಡುತ್ತಿದ್ದರೆಂದು ಗೊತ್ತಾಗಿದೆ. ಪ್ರಭಾಕರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗುತ್ತಿದೆ’ ಎಂದೂ ತಿಳಿಸಿದರು.

‘ಡ್ರಗ್ಸ್ ಜಾಲದಲ್ಲಿ ಮಾಜಿ ಸಚಿವ ಲಮಾಣಿ ಪುತ್ರ’

‘ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪ ಮಾತ್ರ ದರ್ಶನ್ ಮೇಲಿತ್ತು. ಇದೀಗ, ಜಾಲದಲ್ಲಿ ದರ್ಶನ್ ಪಾತ್ರವಿರುವುದಕ್ಕೆ ಪುರಾವೆಗಳು ಸಿಕ್ಕಿವೆ. ಆರೋಪಿಗಳೆಲ್ಲರೂ ಸೇರಿ ರಾಜ್ಯಮಟ್ಟದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಮಾಹಿತಿ ಬಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ದರ್ಶನ್ ಹಾಗೂ ಇತರೆ ಆರೋಪಿಗಳು ಜಾಲದಲ್ಲಿ ಭಾಗಿಯಾಗಿರುವ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳನ್ನು ಕಲೆಹಾಕಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಕಾಲೇಜು ದಿನದಿಂದಲೇ ಸ್ನೇಹಿತರಾದ ಆರೋಪಿಗಳು ಗಾಂಜಾ ಸೇದುತ್ತಿದ್ದರು. ಬಳಿಕ ಗಾಂಜಾ ಮಾರಾಟ ಮಾಡಲಾರಂಭಿಸಿದ್ದರು. ಕೆಲವರಿಂದ ಗಾಂಜಾ ಖರೀದಿಸಿ, ಕೆಲ ವಿದ್ಯಾರ್ಥಿಗಳಿಗೆ ಮಾರುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಲಮಾಣಿ ಫಾರ್ಮ್‌ಹೌಸ್‌ನಲ್ಲಿ ಆಶ್ರಯ; ‘ಸುಜಯ್ ಬಂಧನವಾದಾಗ ಆರೋಪಿ ಹೇಮಂತ್, ಕೊಡಗಿನಲ್ಲಿದ್ದ. ದರ್ಶನ್‌ಗೆ ಕರೆ ಮಾಡಿದ್ದ ಆತ, ಪೊಲೀಸರು ತನ್ನನ್ನು ಹುಡುಕುತ್ತಿರುವುದಾಗಿ ತಿಳಿಸಿದ್ದ. ಹೇಮಂತ್‌ನನ್ನು ರಾಣೆಬೆನ್ನೂರು ತಾಲ್ಲೂಕಿನ ಖಡ್ಡೆರಾಯನಹಳ್ಳಿರುವ ಫಾರ್ಮ್‌ಹೌಸ್‌ಗೆ ಕರೆಸಿಕೊಂಡಿದ್ದ ದರ್ಶನ್‌, ಒಂದು ದಿನ ಅಲ್ಲಿಯೇ ಇರಿಸಿಕೊಂಡಿದ್ದ’ ಎಂದೂ ಮೂಲಗಳು ಹೇಳಿವೆ.

‘ಆರೋಪಿ ಸುನೇಶ್, ಇನ್ನೊಬ್ಬ ಸ್ನೇಹಿತ ಪ್ರತೀಕ್ಷ ಜೊತೆ ಗೋವಾಕ್ಕೆ ಮೊದಲೇ ಹೋಗಿದ್ದ. ದರ್ಶನ್ ಹಾಗೂ ಹೇಮಂತ್ ಒಟ್ಟಿಗೆ ಗೋವಾಗೆ ತೆರಳಿದ್ದರು. ನಂತರ ನಾಲ್ವರು, ಗೋವಾದಲ್ಲಿ ಉಳಿದುಕೊಂಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.