ADVERTISEMENT

ಮಿದುಳಿನ ಆರೋಗ್ಯ– ರಾಬಿನ್‌ ಉತ್ತಪ್ಪ ರಾಯಭಾರಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2022, 15:17 IST
Last Updated 9 ಏಪ್ರಿಲ್ 2022, 15:17 IST
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ   

ಬೆಂಗಳೂರು: ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರನ್ನುಮಿದುಳಿನ ಆರೋಗ್ಯ ಹಾಗೂ ಮಾನಸಿಕ ಆರೋಗ್ಯ ಕಾರ್ಯಕ್ರಮದ ರಾಯಭಾರಿಯನ್ನಾಗಿ ನೇಮಿಸಿಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಕಾರ್ಯಕ್ರಮವು ಆರೋಗ್ಯ ಸಚಿವಾಲಯ ಹಾಗೂ ನಿಮ್ಹಾನ್ಸ್ ಸಹಯೋಗದಲ್ಲಿ ನಡೆಯಲಿದೆ. ಮಿದುಳಿನ ಅನಾರೋಗ್ಯ ಸಮಸ್ಯೆಗಳು ತ್ವರಿತವಾಗಿ ಹೆಚ್ಚುತ್ತಿವೆ. ಇದು ಸಮಾಜದ ಮೇಲೆಯೂ ಗಮನಾರ್ಹವಾದ ಪರಿಣಾಮ ಬೀರುತ್ತಿದೆ. ಆರಂಭಿಕ ಹಂತದಲ್ಲಿಯೇ ಈ ಸಮಸ್ಯೆಯನ್ನು ಪತ್ತೆ ಹಚ್ಚಿ, ಚಿಕಿತ್ಸೆ ಒದಗಿಸಿದಲ್ಲಿ ಅಂಗವೈಕಲ್ಯ ಮತ್ತು ಮರಣ ತಡೆಯಲು ಸಾಧ್ಯ. ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಮಿದುಳಿನ ಅಸ್ವಸ್ಥತೆ ಎದುರಿಸುವ ಪ್ರಮಾಣವನ್ನುಶೇ 40 ರಷ್ಟು ತಡೆಯಬಹುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನರ ರೋಗ ಸಮಸ್ಯೆ ಎದುರಿಸುತ್ತಿರುವವರಲ್ಲಿ ಶೇ 60ರಿಂದ ಶೇ 90 ರಷ್ಟು ಮಂದಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ. ರೋಗದ ಆರಂಭಿಕ ಲಕ್ಷಣ ಗುರುತಿಸುವುದು ಹಾಗೂ ಸಕಾಲಕ್ಕೆ ಚಿಕಿತ್ಸೆ ನೀಡುವುದು ಮುಖ್ಯ. ಈ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಕಡಿಮೆ. ರಾಜ್ಯದಲ್ಲಿ ಸಾಮಾನ್ಯ ನರರೋಗ ಮತ್ತು ಮಾನಸಿಕ ಅಸ್ವಸ್ಥತೆ ಬಗ್ಗೆ ಜಾಗೃತಿ ಹೆಚ್ಚಿಸಬೇಕು ಎಂದು ಇಲಾಖೆ ಹೇಳಿದೆ.

ADVERTISEMENT

ನಗರಗಳು, ಪಟ್ಟಣಗಳು ಮತ್ತು ದೂರದ ಹಳ್ಳಿಗಳಲ್ಲಿನ ದುರ್ಬಲ ಜನರ ಮಿದುಳು ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಹೀಗಾಗಿ, ರಾಬಿನ್ ಉತ್ತಪ್ಪ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ನೇಮಕಾತಿಯು ಮೂರು ವರ್ಷಗಳವರೆಗೆ ಜಾರಿ ಇರಲಿದ್ದು, ಸಾರ್ವಜನಿಕರ ಹಿತಾಸಕ್ತಿಯಿಂದ ಸಂಭಾವನೆರಹಿತವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.