ADVERTISEMENT

ಸ್ತನ್ಯಪಾನ ಸಪ್ತಾಹ: ರಾಜ್ಯದಾದ್ಯಂತ ಎದೆ ಹಾಲಿನ ಬಗ್ಗೆ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 15:25 IST
Last Updated 1 ಆಗಸ್ಟ್ 2023, 15:25 IST
   

ಬೆಂಗಳೂರು: ಸ್ತನ್ಯಪಾನ ಸಪ್ತಾಹವನ್ನು ಹಮ್ಮಿಕೊಂಡಿರುವ ಆರೋಗ್ಯ ಇಲಾಖೆ, ‘ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಾಯಿಯ ಎದೆಹಾಲು ಸಹಕಾರಿ. ಇದರಿಂದ ರೋಗನಿರೋಧಕ ಶಕ್ತಿ ಮಗುವಿನಲ್ಲಿ ಹೆಚ್ಚಳವಾಗಲಿದೆ’ ಎಂದು ತಿಳಿಸಿದೆ.

ಈ ಸಪ್ತಾಹಕ್ಕೆ ಮಂಗಳವಾರ ಚಾಲನೆ ಸಿಕ್ಕಿದ್ದು, ಇಲಾಖೆಯು ರಾಜ್ಯದಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ತಾಯಿಯ ಎದೆಹಾಲಿನಲ್ಲಿ ಮಗುವಿನ ಬೆಳವಣಿಗೆಗೆ ಬೇಕಾದ ಪೌಷ್ಟಿಕತೆ, ಖನಿಜಾಂಶ ಮತ್ತು ಹೇರಳವಾದ ನೀರಿನ ಅಂಶಗಳು ಅಡಕವಾಗಿವೆ‌. ಮಗುವಿಗೆ ಇದು ಮೊದಲ ಲಸಿಕೆಯಾಗಲಿದೆ. ಮೊದಲ ಮೂರು ದಿನದ ಹಾಲಿನಲ್ಲಿ ಹೆಚ್ಚು ರೋಗನಿರೋಧಕಗಳಿರಲಿದ್ದು, ಮಗುವಿಗೆ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ, ಸೋಂಕುಗಳಿಂದ ರಕ್ಷಣೆ ನೀಡುತ್ತದೆ. ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸಲು ಪ್ರಾರಂಭಿಸಿ, ಆರು ತಿಂಗಳವರೆಗೆ ಎದೆಹಾಲನ್ನು ಮಾತ್ರ ನೀಡಬೇಕು’ ಎಂದು ಇಲಾಖೆಯ ಮಕ್ಕಳ ಆರೋಗ್ಯ ವಿಭಾಗದ ಉಪನಿರ್ದೇಶಕರು ತಿಳಿಸಿದ್ದಾರೆ.

‘ಸ್ತನ್ಯಪಾನದಿಂದ ಶಿಶು ಮರಣ ತಪ್ಪಿಸಲು ಸಾಧ್ಯವಾಗುತ್ತದೆ. ತಾಯಿಯ ಎದೆಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯ ಮೇಲೆ ಇಲ್ಲ. ಇದನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಮಗುವಿಗೆ ನೀಡುವ ಚುಚ್ಚುಮದ್ದಿಗಿಂತ ಇದು ಹೆಚ್ಚು ಶಕ್ತಿಶಾಲಿಯಾ’ ಎಂದು ಹೇಳಿದ್ದಾರೆ.

ADVERTISEMENT

‘ರಾಜ್ಯದಲ್ಲಿ ಆಸ್ಪತ್ರೆ ಹೆರಿಗೆ ಪ್ರಮಾಣ ಹೆಚ್ಚಳವಾಗಿದೆ. ಆದರೆ, ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಪ್ರಾರಂಭಿಸುವ ಪ್ರಮಾಣ ಇಳಿಕೆಯಾಗಿದೆ. ಈ ಪ್ರಮಾಣ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್‌)-4ರ ಪ್ರಕಾರ ಶೇ 56.3 ರಷ್ಟಿತ್ತು. ಎನ್‌ಎಫ್‌ಎಚ್‌ಎಸ್‌–5ರಲ್ಲಿ ಶೇ 49.1ಕ್ಕೆ ಇಳಿಕೆಯಾಗಿದೆ. ಆದ್ದರಿಂದ ಸಾಮಾನ್ಯ ಮತ್ತು ಸಿಸೇರಿಯನ್ ಹೆರಿಗೆಗಳಲ್ಲಿ ನವಜಾತ ಶಿಶುಗಳಿಗೆ ಸ್ತನ್ಯಪಾನ ಖಚಿತಪಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.