ADVERTISEMENT

ಪ್ರತಿ ಬುಧವಾರ 10 ಲಕ್ಷ ಜನರಿಗೆ ಲಸಿಕೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 19:31 IST
Last Updated 30 ಆಗಸ್ಟ್ 2021, 19:31 IST
ಕೆ. ಸುಧಾಕರ್
ಕೆ. ಸುಧಾಕರ್   

ಬೆಂಗಳೂರು: ‘ರಾಜ್ಯದಾದ್ಯಂತ ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ಹಮ್ಮಿಕೊಂಡು, ಸುಮಾರು 10 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಆಗಸ್ಟ್ ತಿಂಗಳಲ್ಲಿಯೇ ಕೇಂದ್ರ ಸರ್ಕಾರದಿಂದ 1.10 ಕೋಟಿ ಲಸಿಕೆ ಬಂದಿದೆ. ಸಿ.ಎಂ ಮತ್ತು ನಾನು ಕೇಂದ್ರ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಲಸಿಕೆ ಪೂರೈಕೆ ಆಗುತ್ತಿದೆ’ ಎಂದರು.

‘ಪ್ರತಿ ದಿನ 5 ಲಕ್ಷ ಲಸಿಕೆ ನೀಡಲಾಗುವುದು. ಬುಧವಾರ ಲಸಿಕಾ ಉತ್ಸವದಲ್ಲಿ 10 ಲಕ್ಷ ಜನರಿಗೆ ಹೆಚ್ಚಿಸಲಿದ್ದೇವೆ. ಒಂದು ತಿಂಗಳಲ್ಲಿ ಒಂದೂವರೆಯಿಂದ ಎರಡು ಕೋಟಿ ಜನರಿಗೆ ಲಸಿಕೆ ನೀಡಬಹುದು’ ಎಂದರು.

ADVERTISEMENT

‘ಇಡೀ ರಾಜ್ಯದಲ್ಲಿ 4 ಕೋಟಿ ಡೋಸ್ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 1 ಕೋಟಿ ಡೋಸ್ ನೀಡಲಾಗಿದೆ. ಬೀದರ್, ಯಾದಗಿರಿ, ರಾಯಚೂರು, ಕಲಬುರ್ಗಿ ಜಿಲ್ಲೆಗಳಲ್ಲಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಕೊಳೆಗೇರಿ ನಿವಾಸಿಗಳಿಗೆ ಪ್ರತಿದಿನ ವಿಶೇಷ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮೊದಲಾದ ಗಡಿಭಾಗದ ಜಿಲ್ಲೆಗಳಲ್ಲಿ ಗಡಿಯಿಂದ 20 ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಆದ್ಯತೆಯಲ್ಲಿ ಲಸಿಕೆ ನೀಡಲಾಗುವುದು’ ಎಂದರು.

‘ಕೋವಿಡ್‌ ಸಂಭವನೀಯ ಮೂರನೇ ಅಲೆ ವಿರುದ್ಧ ಹೋರಾಡುವ ಕುರಿತು ಖಾಸಗಿ ಆಸ್ಪತ್ರೆಗಳ ಮತ್ತು ನರ್ಸಿಂಗ್‌ ಹೋಮ್‌ಗಳ ಅಸೋಸಿಯೇಷನ್‌ (ಫನಾ) ವರದಿ ನೀಡಿದೆ. ಈ ಬಗ್ಗೆ ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ಚರ್ಚಿಸಲಾಗುವುದು’ಎಂದರು.

‘2ನೇ ಡೋಸ್ ಪಡೆದವರು ಶೇ 20ರಷ್ಟು’
‘ಇಡೀ ರಾಜ್ಯದಲ್ಲಿ ಶೇ 20ರಷ್ಟು ಮಂದಿಗೆ, ಬೆಂಗಳೂರಿನಲ್ಲಿ ಶೇ 27ರಷ್ಟು ಜನರಿಗೆ ಮಾತ್ರ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇಡೀ ದೇಶದಲ್ಲಿ ಲಸಿಕೆ ಕಾರ್ಯ ಪೂರ್ಣಗೊಂಡ ನಗರ ಬೆಂಗಳೂರು ಆಗಬೇಕೆಂಬ ಗುರಿ ಇದೆ’ ಎಂದು ಸುಧಾಕರ್‌ ಹೇಳಿದರು.

‘ಮೊದಲ ಡೋಸ್ ಪಡೆದಾಗ ನೀಡಿದ ಮೊಬೈಲ್‌ ಸಂಖ್ಯೆಯನ್ನೇ ಎರಡನೇ ಡೋಸ್‌ಗೂ ನೀಡಬೇಕು. ಇಲ್ಲದಿದ್ದರೆ ಲಸಿಕೆ ಪಡೆದವರ ಪ್ರಮಾಣದ ಬಗ್ಗೆ ಸರಿಯಾದ ಮಾಹಿತಿ ಲಭ್ಯವಾಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.