ADVERTISEMENT

4 ಜಿಲ್ಲೆಗಳಲ್ಲಿ ಬಿಸಿಗಾಳಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 19:45 IST
Last Updated 22 ಮೇ 2020, 19:45 IST

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ ಜಿಲ್ಲೆಗಳಲ್ಲಿ ಇದೇ 23 ಮತ್ತು 24ರಂದು ಸುಡುಗಾಳಿ ಬೀಸಲಿದೆ. ಈ ಭಾಗಗಳಲ್ಲಿ ಸರಾಸರಿಗಿಂತ 4 ಅಥವಾ 5 ಡಿಗ್ರಿ ಸೆಲ್ಸಿಯಸ್‍ವೆರೆಗೆ ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಏರಲಿರುವ ತಾಪಮಾನದಿಂದ ದೇಹವನ್ನು ರಕ್ಷಿಸಿಕೊಳ್ಳಲು ಎರಡೂ ದಿನಗಳ ಕಾಲ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 3.30ರವರೆಗೆ ಜನರು ಉರಿಬಿಸಿಲಿಗೆ ಮೈಯೊಡ್ಡದಂತೆ ಇಲಾಖೆ ಎಚ್ಚರಿಸಿದೆ.

‘ಉತ್ತರ ಭಾಗದಿಂದ ಬಿಸಿ ಹಾಗೂ ಒಣ ಹವೆ ಬೀಸುವುದರಿಂದ ರಾಜ್ಯದ ಕೆಲವು ಭಾಗಗಳನ್ನು ಈ ಬಿಸಿಯಾದ ಅಲೆಗಳು ಪ್ರವೇಶಿಸುತ್ತವೆ. ಇದು ಬಲಹೀನರ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದ್ದು, ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್.ಪಾಟೀಲ ತಿಳಿಸಿದರು.

ADVERTISEMENT

ಕಲಬುರ್ಗಿಯಲ್ಲಿ ಶುಕ್ರವಾರ 43.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 42, ವಿಜಯಪುರ, ಬೀದರ್ 40 ಹಾಗೂ ಮಡಿಕೇರಿಯಲ್ಲಿ 25 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ.

ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ಮೇ 25ರಿಂದ ಮಳೆ ಹೆಚ್ಚಾಗಲಿದೆ. ಸುಬ್ರಹ್ಮಣ್ಯ, ಹಾಸನದಲ್ಲಿ 2 ಸೆಂ.ಮೀ, ಬೆಳ್ತಂಗಡಿ, ಭಾಗಮಂಡಲ, ಶ್ರವಣಬೆಳಗೊಳದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.