ADVERTISEMENT

ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಭಾರದ ಲೋಹ: ಪರೀಕ್ಷೆಗೆ NGT ಸೂಚನೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 13:47 IST
Last Updated 22 ನವೆಂಬರ್ 2023, 13:47 IST
ಬೆಳ್ಳಂದೂರು ಕೆರೆ: ಮಾಹಿತಿಗೆ ಎನ್‌ಜಿಟಿ ಸೂಚನೆ
ಬೆಳ್ಳಂದೂರು ಕೆರೆ: ಮಾಹಿತಿಗೆ ಎನ್‌ಜಿಟಿ ಸೂಚನೆ   

ನವದೆಹಲಿ: ಬೆಂಗಳೂರಿನಲ್ಲಿ ಮಾರಾಟವಾಗುವ ತರಕಾರಿಗಳಲ್ಲಿ ಸುರಕ್ಷತಾ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರದ ಲೋಹಗಳ ಉಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ), ಇವುಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಯೋಗಾಲಯದಲ್ಲಿ ಸಮಗ್ರ ವಿಶ್ಲೇಷಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿದೆ.

ಮಾಧ್ಯಮ ವರದಿಗಳ ಆಧಾರದಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ನ್ಯಾಯಮೂರ್ತಿ ಪ್ರಕಾಶ್‌ ಶ್ರೀವಾಸ್ತವ ನೇತೃತ್ವದ ಪ್ರಧಾನ ಪೀಠ, ‘ಪರಿಸರಕ್ಕೆ ಸಂಬಂಧಿಸಿ ಇದೊಂದು ಗಂಭೀರ ಪ್ರಕರಣ’ ಎಂದು ಹೇಳಿದೆ.

ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನಾ ಸಂಸ್ಥೆಯ (ಎಂಪ್ರಿ) ಅಧ್ಯಯನ ವರದಿಗಳನ್ನು ಉಲ್ಲೇಖಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನ್ಯಾಯಮಂಡಳಿಗೆ ಕಿರು ವರದಿ ಸಲ್ಲಿಸಿದೆ. ತರಕಾರಿಗಳ ಮಾಲಿನ್ಯದ ಪ್ರಮಾಣವನ್ನು ಅರ್ಥ ಮಾಡಿಕೊಳ್ಳಲು ಹಾಗೂ ಅದರ ಮೂಲದ ಕುರಿತು ರಾಜ್ಯ ಮಟ್ಟದಲ್ಲಿ ಆಳ ಹಾಗೂ ಸಮಗ್ರವಾದ ತನಿಖೆ ನಡೆಸಬೇಕು ಹಾಗೂ ಇದಕ್ಕೆ ವಿವಿಧ ಇಲಾಖೆಗಳ ಸಹಯೋಗ ಪಡೆಯಬೇಕು ಎಂದು ಮಂಡಳಿಯು ವರದಿಯಲ್ಲಿ ತಿಳಿಸಿದೆ.

ADVERTISEMENT

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎಂಪ್ರಿಯನ್ನು ಪ್ರತಿವಾದಿಗಳನ್ನಾಗಿ ಪೀಠ ಸೇರ್ಪಡೆ ಮಾಡಿದೆ. ಈ ವಿಷಯದ ಬಗ್ಗೆ ತಳಮಟ್ಟದ ವಾಸ್ತವ ಸ್ಥಿತಿಯ ಪರಿಶೀಲನೆ ನಡೆಸಬೇಕು ಹಾಗೂ ಎಂಪ್ರಿ ವರದಿಯನ್ನು ಸಮರ್ಪಕವಾಗಿ ಪರಿಶೀಲಿಸಿ ವರದಿ ನೀಡಬೇಕು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ. ಪ್ರಕರಣವನ್ನು ದಕ್ಷಿಣ ವಲಯ ಪೀಠಕ್ಕೆ ವರ್ಗಾಯಿಸಿರುವ ಪ್ರಧಾನ ಪೀಠವು ವಿಚಾರಣೆಯನ್ನು 2024ರ ಜನವರಿ 10ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.