ADVERTISEMENT

ಹಲವೆಡೆ ಅತಿವೃಷ್ಟಿ; ಕೆಲವೆಡೆ ಟ್ಯಾಂಕರ್ ಮೂಲಕ ನೀರು!

ಕೆ.ಜೆ.ಮರಿಯಪ್ಪ
Published 9 ಆಗಸ್ಟ್ 2019, 20:00 IST
Last Updated 9 ಆಗಸ್ಟ್ 2019, 20:00 IST

ಬೆಂಗಳೂರು:ಉತ್ತರ ಕರ್ನಾಟಕ, ಮಲೆನಾಡು, ಕರಾವಳಿ, ಕೊಡಗು ಭಾಗದ ಜನರು ನೀರಿನಲ್ಲಿ ಮುಳುಗೇಳುತ್ತಿದ್ದರೆ, ಬೆಂಗಳೂರು, ಮೈಸೂರು ಭಾಗಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳ ಜನರುಕುಡಿಯುವ ನೀರಿಗೆ ಪರಿತಪಿಸುವುದು ಇನ್ನೂ ನಿಂತಿಲ್ಲ.

ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಪ್ಪಿಲ್ಲ. ಮುಂಗಾರು ಮಳೆ ಜೋರು ಪಡೆದುಕೊಳ್ಳಬೇಕಾದ ಸಮಯದಲ್ಲೂ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಮೈಸೂರು, ಹಾಸನ, ದಾವಣಗೆರೆ, ಚಾಮರಾಜನಗರ ಜಿಲ್ಲೆಗಳ ಕೆಲವು ಹಳ್ಳಿಗಳಿಗೆ ಮಾತ್ರ ಟ್ಯಾಂಕರ್ ನೀರು ಕೊಡಲಾಗುತ್ತಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು 138 ಗ್ರಾಮಗಳು, ತುಮಕೂರು 130, ಚಿತ್ರದುರ್ಗ 117, ಬೆಂಗಳೂರು ಗ್ರಾಮಾಂತರ 83, ಮಂಡ್ಯ ಜಿಲ್ಲೆಯ 55 ಹಳ್ಳಿಗಳಿಗೆ ಇನ್ನೂ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಸಂಖ್ಯೆಯನ್ನು ಗಮನಿಸಿದರೆ, ಬರ ತೀವ್ರ ಸ್ವರೂಪ ಪಡೆದುಕೊಂಡಿರುವುದು ಗೊತ್ತಾಗುತ್ತದೆ.

ADVERTISEMENT

ದಕ್ಷಿಣ ಒಳನಾಡಿನಲ್ಲಿ ಜುಲೈ, ಆಗಸ್ಟ್ ತಿಂಗಳಲ್ಲಿ ಮುಂಗಾರು ಮಳೆ ಬಿರುಸಾಗುತ್ತದೆ. ಆದರೆ ಈ ಸಲ ಸಾಕಷ್ಟು ಹಳ್ಳಿಗಳು ಇನ್ನೂ ಮಳೆ ಮುಖವನ್ನೇ ನೋಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.