ADVERTISEMENT

ಉತ್ತರ ಕರ್ನಾಟಕ: ಹಲವೆಡೆ ಭಾರಿ ಮಳೆ

ಕಲಬುರ್ಗಿ: ಆಳಂದ ತಾಲ್ಲೂಕಿನ ಹಡಲಗಿ ಬಳಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ ಪಾರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 20:08 IST
Last Updated 24 ಜುಲೈ 2020, 20:08 IST
ಆಳಂದ ತಾಲ್ಲೂಕಿನ ಹಡಲಗಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಕೊಡ ಮಾರುವ ವ್ಯಕ್ತಿ
ಆಳಂದ ತಾಲ್ಲೂಕಿನ ಹಡಲಗಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಪ್ಲಾಸ್ಟಿಕ್ ಕೊಡ ಮಾರುವ ವ್ಯಕ್ತಿ   

ಬೆಂಗಳೂರು: ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆ ಕಮಲಾಪುರ, ಆಳಂದ ತಾಲ್ಲೂಕುಗಳಲ್ಲಿ ಶುಕ್ರವಾರ ಭಾರಿ ಮಳೆ ಸುರಿದಿದ್ದು, ಹಳ್ಳ–ನಾಲೆಗಳು ತುಂಬಿ ಹರಿಯುತ್ತಿವೆ.

ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿಯೂ ಉತ್ತಮ ಮಳೆ ಬಿದ್ದಿದೆ.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ, ನಿಂಗದಳ್ಳಿ, ಹೆಬಳಿ, ಪಡ ಸಾವಳಿ, ಜೀರಹಳ್ಳಿ, ಮಟಕಿ, ತೀರ್ಥ ಹಳ್ಳಗಳಿಗೆ ಪ್ರವಾಹ ಬಂದಿದ್ದರಿಂದ ಈ ಗ್ರಾಮಗಳ ಹಾಗೂಕಮಲಾಪುರ ತಾಲ್ಲೂಕಿನ ಏಳು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ದಸ್ತಾಪುರ ಗ್ರಾಮ ನಡುಗಡ್ಡೆಯಾಗಿದೆ. ಸಾವಿರಾರು ಎಕರೆ ಬೆಳೆ ಹಾನಿಯಾಗಿದೆ.

ADVERTISEMENT

ಆಳಂದ ತಾಲ್ಲೂಕಿನ ಹಡಲಗಿ ಸಮೀಪ ವ್ಯಾಪಕ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳವನ್ನು ಬೈಕ್‌ ನಲ್ಲಿ ದಾಟುತ್ತಿದ್ದ ಪ್ಲಾಸ್ಟಿಕ್‌ ಕೊಡ ಮಾರುವವ್ಯಕ್ತಿಯೊಬ್ಬರು ಸಿನಿಮೀಯ ರೀತಿಯಲ್ಲಿ ಪಾರಾಗಿದ್ದಾರೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಅವರು ನಂತರ ಮರದ ನೆರವಿನಿಂದ ಜೀವ ಉಳಿಸಿಕೊಂಡಿದ್ದಾರೆ. ಬೈಕ್‌, ಕೊಡಗಳು ಕೊಚ್ಚಿಕೊಂಡು ಹೋಗಿವೆ.

ಭೀಮಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸೊನ್ನ ಬ್ಯಾರೇಜ್‌ನಿಂದ15 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಬೆಣ್ಣೆತೊರಾ ಜಲಾಶಯ ಭರ್ತಿಯಾಗಿದೆ.

ಕಲಬುರ್ಗಿ ನಗರ, ಚಿಂಚೋಳಿ ಹಾಗೂ ಬೀದರ್‌ ಜಿಲ್ಲೆಯ ಭಾಲ್ಕಿ, ಔರಾದ್‌ಗಳಲ್ಲಿಯೂ ಸ್ವಲ್ಪ ಸುರಿಯಿತು. ಯಾದಗಿರಿ ಸಮೀಪದ ನಾಯ್ಕಲ್ ಗ್ರಾಮದ ಅಂಬೇಡ್ಕರ್ ನಗರದಲ್ಲಿ ಗುರುವಾರ ರಾತ್ರಿ ಮನೆ ಕುಸಿದಿದ್ದು, ಅದರಡಿ ಸಿಲುಕಿದ್ದ 8 ತಿಂಗಳ ಮಗು ಸೇರಿ ನಾಲ್ವರನ್ನು ನೆರೆಹೊರೆಯವರು ರಕ್ಷಿಸಿದ್ದಾರೆ.

ತಂದೆ– ಮಗನ ಶವಪತ್ತೆ: ರಾಯಚೂರು ಜಿಲ್ಲೆಯ ಗುಡ್ಲಬಂಡಿ ಜಲಾಶಯ ವೀಕ್ಷಿಸುವಾಗ ಗುರುವಾರ ಏಕಾಏಕಿ ನೀರು ಹರಿದು ಬಂದು ಕೊಚ್ಚಿ ಹೋಗಿದ್ದ ತಂದೆ– ಮಗನ ಶವಗಳು ಶುಕ್ರವಾರ ಹಳ್ಳದಲ್ಲಿ ಪತ್ತೆಯಾಗಿವೆ.

ಮಳೆಗೆ ಕೊಚ್ಚಿ ಹೋದ ದಾಳಿಂಬೆ ಬೆಳೆ: ಹುಬ್ಬಳ್ಳಿ: ಬಾಗಲಕೋಟೆ, ಬಳ್ಳಾರಿ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ.

ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿ ಯಲ್ಲಿ ಶುಕ್ರವಾರ ಭಾರಿ ಮಳೆ ಸುರಿದು ಮೆಕ್ಕೆಜೋಳ, ಈರುಳ್ಳಿ, ಜೋಳ, ಶೇಂಗಾ ಬೆಳೆ ಹಾನಿಯಾಗಿದ್ದು, ದಾಳಿಂಬೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಮಳೆಯ ರಭಸಕ್ಕೆ ಸರ್ವೋದಯ, ಲಿಂಗನಹಳ್ಳಿ ತಾಂಡಾ, ಶ್ರೀಕಂಠಾಪುರ ತಾಂಡಾ, ಯರ್ರಬೊನಹಳ್ಳಿ, ಸಿಡೇಗಲ್ಲು ಸುತ್ತ ಮುತ್ತಲ ಪ್ರದೇಶಗಳಲ್ಲಿಹಳ್ಳಗಳು ತುಂಬಿ ಹರಿಯುತ್ತಿವೆ. ಹೊಲಗಳ ಒಡ್ಡುಗಳು ಕೊಚ್ಚಿಕೊಂಡು ಹೋಗಿವೆ.

ದಾಳಿಂಬೆ ತೋಟಗಳಲ್ಲಿ ನೀರುನಿಂತಿದ್ದು ಹನಿ ನೀರಾವರಿಗೆ ಹಾಕಿದ್ದ ಪೈಪ್‌ಲೈನ್‌ ಕೂಡ ನೀರಿನ ಹೊಡೆತಕ್ಕೆ ಕಿತ್ತು ಹೋಗಿದೆ. ರಾಜ ಎನ್ನುವವರ ಹೊಲದಲ್ಲಿ ಇತ್ತೀಚೆಗಷ್ಟೆ ನಾಟಿ ಮಾಡಿದ್ದ ಸುಮಾರು600 ಪಪ್ಪಾಯಿ ಗಿಡಗಳು ಸಂಪೂರ್ಣ ನಾಶವಾಗಿವೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಆಲಮಟ್ಟಿ, ನಿಡಗುಂದಿ, ಗೊಳಸಂಗಿ, ವಂದಾಲ, ಸೇರಿದಂತೆ ನಾನಾ ಕಡೆ ಜೋರು ಮಳೆ ಸುರಿಯಿತು. ಚಿಕ್ಕೋಡಿಯಲ್ಲಿ ಹೆಚ್ಚು ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಹಲವೆಡೆ ಶುಕ್ರವಾರ ಮಳೆ ಬಿಡುವು ನೀಡಿತ್ತು.

ಗುಡ್ಡ ಕುಸಿದು ಇಬ್ಬರು ಬಾಲಕರ ಸಾವು

ರಾಯಚೂರು: ಜಿಲ್ಲೆಯಲ್ಲಿ ಶುಕ್ರವಾರ ಗುಡ್ಡ ಕುಸಿದು ಇಬ್ಬರು ಬಾಲಕರು ಹಾಗೂ ಸಿಡಿಲು ಬಡಿದು ಸಹೋದರರಿಬ್ಬರು ಮೃತಪಟ್ಟಿದ್ದಾರೆ‌.

ದೇವದುರ್ಗ ಗೌರಂಪೇಟೆ ಪಕ್ಕದ ಗುಡ್ಡದ ಬಳಿ ಆಟವಾಡುತ್ತಿದ್ದ ಮೂವರು ಬಾಲಕರ ಮೇಲೆ ಮಣ್ಣು ಕುಸಿದಿದ್ದು, ರಾಮಪ್ಪ ಶಿವ‍ಪ್ಪ (6) ಮತ್ತು ವೀರೇಶ ಹನುಮಂತರಾಯ (13) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮತ್ತೊಬ್ಬ ಬಾಲಕ ಮೌನೇಶ ಶಿವರಾಜ ಗಾಯಗೊಂಡಿದ್ದು ರಾಯಚೂರಿನಲ್ಲಿ ರಿಮ್ಸ್‌ಗೆ ದಾಖಲಿಸಲಾಗಿದೆ. ಮಳೆಯಿಂದ ಸಡಿಲುಗೊಂಡಿದ್ದ ಮಣ್ಣಿನ ಗುಡ್ಡದ ಪಕ್ಕ ಇವರೆಲ್ಲ ಆಟವಾಡುತ್ತಿದ್ದರು.

ರಾಯಚೂರು ತಾಲ್ಲೂಕಿನ ಸಿಂಗನೋಡಿಯಲ್ಲಿ ಸಿಡಿಲು ಬಡಿದು ಸಹೋದರರಾದ ರವಿಚಂದ್ರ (23), ವಿಷ್ಣು (18) ಮೃತಪಟ್ಟಿದ್ದಾರೆ. ಇವರ ತಾಯಿ ಮಹಾದೇವಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ರಿಮ್ಸ್ ಗೆ ದಾಖಲಿಸಲಾಗಿದೆ. ಎಲ್ಲರೂ ಒಟ್ಟಾಗಿ ಗುಡಿಸಲಿನಲ್ಲಿ ಕುಳಿತಿದ್ದಾಗ ಸಿಡಿಲು ಬಡಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.