ಮಂಗಳೂರಿಲ್ಲಿ ಭಾನುವಾರ ಸಂಜೆ ಅಬ್ಬರಿಸಿದ ಮಳೆಯ ಸಂದರ್ಭದಲ್ಲಿ ಆಗಸದಲ್ಲಿ ಮೂಡಿದ್ದ ಮಿಂಚಿನ ಚಿತ್ತಾರ ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು.
ಪ್ರಜಾವಾಣಿ ಚಿತ್ರ: ಫಕ್ರುದ್ದೀನ್ ಎಚ್.
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಭಾಗಗಳು ಸೇರಿದಂತೆ ರಾಜ್ಯದ ಹಲವೆಡೆ ಭಾನುವಾರ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಸಿಡಿಲು ಬಡಿದು ಮೂವರು
ಮೃತಪಟ್ಟಿದ್ದಾರೆ.
ಸುಳ್ಯ ತಾಲ್ಲೂಕಿನ ಪೆರ್ಲಂಪಾಡಿಯಲ್ಲಿ ಅಲಿಕಲ್ಲು ಮಳೆ ಆಗಿದೆ. ಮಂಗಳೂರಿನಲ್ಲಿ ರಾತ್ರಿ 7.30ರ ಸುಮಾರಿಗೆ ಗುಡುಗು ಸಿಡಿಲಿನೊಂದಿಗೆ ಮಳೆಯಾಯಿತು.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಲವೆಡೆ ಮಳೆಯಾಗಿದೆ. ಕಳಸ ಪಟ್ಟಣ ಹಾಗೂ ಸುತ್ತಲಿನ ಪ್ರದೇಶದಲ್ಲೂ ಗುಡುಗು ಮತ್ತು ಗಾಳಿಯ ಆರ್ಭಟದೊಂದಿಗೆ ಭಾರಿ ಮಳೆ ಸುರಿದಿದೆ.
ಕಲ್ಯಾಣ ಕರ್ನಾಟಕದ ಭಾಗದಲ್ಲಿ ಆಲಿಕಲ್ಲು ಮಳೆ:
ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕೆ.ಗುಡದಿನ್ನಿ ಗ್ರಾಮದ ಹೊರವಲಯದಲ್ಲಿ ಸಿಡಿಲು ಬಡಿದು ಸಾಯಣ್ಣ ಯಾದವ (52) ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹುಬ್ಬಳ್ಳಿ: ಸಿಡಿಲಿಗೆ ಇಬ್ಬರು ಬಲಿ
ಕಳೆದ 24 ಗಂಟೆಗಳಲ್ಲಿ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಹರವಿ ಬಸಾಪುರ ಗ್ರಾಮದಲ್ಲಿ ರವಿಚಂದ್ರ ಚೌಟಗಿ (39) ಮತ್ತು ತೆಲಿಗಿ ಗ್ರಾಮದಲ್ಲಿ ಬಿ.ಹಾಲೇಶಪ್ಪ (55) ಎಂಬುವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ವಿವಿಧೆಡೆ ಆಲಿಕಲ್ಲು ಮಳೆಗೆ ನೂರಾರು ಎಕರೆ ಹಿಂಗಾರು ಭತ್ತದ ಬೆಳೆ ಹಾನಿಯಾಗಿದೆ.
ಬಾಗಲಕೋಟೆ ನಗರ ಸೇರಿ ಕೆರೂರ, ಲೋಕಾಪುರದಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಬೀದರ್ ಜಿಲ್ಲೆಯ ಭಾಲ್ಕಿ ಗ್ರಾಮೀಣ ಪ್ರದೇಶ ಹಾಗೂ ಯಾದಗಿರಿ ಜಿಲ್ಲೆಯ ಗುರುಮಠಕಲ್‌ನ ಸುತ್ತಮುತ್ತ ಆಲಿಕಲ್ಲು ಮಳೆಯಾಗಿದೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮದನಾ ಗ್ರಾಮದಲ್ಲಿ ಭಾರಿ ಮಳೆ, ಗಾಳಿಗೆ ಮಹೇಶ ಬಸಪ್ಪ ಕೂತನವೊಯ್ನ್ ಎಂಬುವವರು ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯ ಸಸಿಗಳು ಮುರಿದು ಬಿದ್ದಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ ಎಂದು ರೈತ ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಬಿರುಸಿನ ಮಳೆ
ಮಡಿಕೇರಿ ನಗರ ಸೇರಿದಂತೆ ತಾಲ್ಲೂಕಿನ ಹಲವೆಡೆ ಭಾನುವಾರ ಮಧ್ಯಾಹ್ನ ಗುಡುಗು–ಸಿಡಿಲು ಸಹಿತ ಬಿರುಸಿನ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.