ADVERTISEMENT

Karnataka Rains | ಕಲ್ಯಾಣ ಕರ್ನಾಟಕ, ಕರಾವಳಿಯಲ್ಲಿ ಮಳೆ ಬಿರುಸು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 23:30 IST
Last Updated 22 ಜುಲೈ 2025, 23:30 IST
<div class="paragraphs"><p>ಕಲಬುರಗಿಯ ಕೋಟೆ ಹತ್ತಿರದ ಹೆರಿಟೇಜ್‌ ಹೋಟೆಲ್‌ ಬಳಿ&nbsp;ಮಂಗಳವಾರ ಬೆಳಿಗ್ಗೆ ರಸ್ತೆ ಮೇಲೆ ನಿಂತಿದ್ದ&nbsp;ಮಳೆ ನೀರಿನಲ್ಲೇ ವಾಹನಗಳು ಸಾಗಿದವು&nbsp;</p></div>

ಕಲಬುರಗಿಯ ಕೋಟೆ ಹತ್ತಿರದ ಹೆರಿಟೇಜ್‌ ಹೋಟೆಲ್‌ ಬಳಿ ಮಂಗಳವಾರ ಬೆಳಿಗ್ಗೆ ರಸ್ತೆ ಮೇಲೆ ನಿಂತಿದ್ದ ಮಳೆ ನೀರಿನಲ್ಲೇ ವಾಹನಗಳು ಸಾಗಿದವು 

   

 ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಬೆಂಗಳೂರು: ಕಲ್ಯಾಣ ಕರ್ನಾಟಕ, ಕರಾವಳಿ ಜಿಲ್ಲೆಗಳು ಸೇರಿ ರಾಜ್ಯದ ವಿವಿಧೆಡೆ ಮಳೆ ಮುಂದುವರಿದಿದೆ. ಬೀದರ್ ಜಿಲ್ಲೆಯಲ್ಲಿ ಎರಡು ಸೇತುವೆಗಳಿಗೆ ಹಾನಿಯಾಗಿದೆ. ಬಸವ ಕಲ್ಯಾಣದಲ್ಲಿ ಕಳೆದ 24 ಗಂಟೆಗಳಲ್ಲಿ ಗರಿಷ್ಠ 11 ಸೆಂ.ಮೀ ಮಳೆಯಾಗಿದೆ.  

ADVERTISEMENT

ಕಲಬುರಗಿ ವರದಿ: ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್‌ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸೋಮವಾರ ರಾತ್ರಿಯಿಡೀ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ. 

ಬೀದರ್‌ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್‌ ವ್ಯಾಪ್ತಿಯಲ್ಲಿ 250 ಎಕರೆ ಜಮೀನಿನಲ್ಲಿ ಬೆಳೆ ಮಳೆಗೆ ಕೊಚ್ಚಿಹೋಗಿದೆ. ಎರಡು ಸೇತುವೆಗಳಿಗೆ ಹಾನಿಯಾಗಿದೆ. ಬಸವಕಲ್ಯಾಣದಲ್ಲಿ 11 ಸೆಂ.ಮೀ ಮಳೆ ಸುರಿದಿದೆ. ಬೀದರ್‌ ನಗರ ಹಾಗೂ ಸುತ್ತಮುತ್ತ ಮಂಗಳವಾರ ಸಂಜೆ ಉತ್ತಮವಾಗಿ ಮಳೆ ಬಿದ್ದಿದೆ. 

ಕಲಬುರಗಿ ನಗರವೂ ಸೇರಿದಂತೆ ಸೇಡಂ, ಚಿತ್ತಾಪುರ, ಚಿಂಚೋಳಿ, ಕಾಳಗಿ ಹಾಗೂ ಜೇವರ್ಗಿ ತಾಲ್ಲೂಕುಗಳಲ್ಲಿ ಸೋಮವಾರ ರಾತ್ರಿ ಉತ್ತಮವಾಗಿ ಮಳೆ ಸುರಿದಿದೆ. 

ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಮುನಿರಾಬಾದ್ ಭಾಗದಲ್ಲಿ ಮಂಗಳವಾರ ಮಳೆಯಾಗಿದೆ. ಮಳೆ ಚುರುಕಾಗಿರುವುದರಿಂದ ಯೂರಿಯಾ ರಸಗೊಬ್ಬರಕ್ಕಾಗಿ ರೈತರು ಪರದಾಡುವಂತಾಗಿದೆ.

ರಾಯಚೂರು, ಸಿಂಧನೂರು, ದೇವದುರ್ಗದಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಉತ್ತಮವಾಗಿ ಮಳೆ ಸುರಿದಿದೆ.  

26ರವರೆಗೆ ಯಲ್ಲೊ ಅಲರ್ಟ್ (ಮಂಗಳೂರು ವರದಿ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊಂಚ ತಗ್ಗಿದ್ದ ಮಳೆ ಮಂಗಳವಾರ ಮತ್ತೆ ಬಿರುಸುಗೊಂಡಿತು. ಇಡೀ ದಿನ ಎಡೆಬಿಡದೆ ಹದವಾದ ಮಳೆ ಸುರಿಯಿತು.

ಜು.26ರವರೆಗೆ ಜಿಲ್ಲೆಯಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ. ನಾಡದೋಣಿ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಿರಂತರ ಮಳೆ (ಮಡಿಕೇರಿ ವರದಿ): ನಗರದಲ್ಲಿ ಮಂಗಳವಾರ ದಿನ ವಿಡೀ ಮಳೆಯಾಗಿದೆ. ಮಡಿಕೇರಿ, ಪೊನ್ನಂಪೇಟೆ ತಾಲ್ಲೂಕಿನಲ್ಲಿ ಸರಾಸರಿ 4 ಸೆಂ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.