ADVERTISEMENT

ಕೊಡಗಿನಲ್ಲಿ ಮತ್ತೆ ನಿರಂತರ ಮಳೆ; ‘ರೆಡ್‌ ಅಲರ್ಟ್‌’ ಘೋಷಣೆ

ಜನಜೀವನ ಸಂಪೂರ್ಣ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 11:31 IST
Last Updated 4 ಸೆಪ್ಟೆಂಬರ್ 2019, 11:31 IST
ಮತ್ತೆ ವರುಣನ ಆರ್ಭಟ... ನಿರಂತರ ಮಳೆಯಿಂದ ಭಾಗಮಂಡಲ – ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನದಿ ನೀರು ಹರಿಯುತ್ತಿರುವ ದೃಶ್ಯ 
ಮತ್ತೆ ವರುಣನ ಆರ್ಭಟ... ನಿರಂತರ ಮಳೆಯಿಂದ ಭಾಗಮಂಡಲ – ಅಯ್ಯಂಗೇರಿ ರಸ್ತೆಯ ಮೇಲೆ ಕಾವೇರಿ ನದಿ ನೀರು ಹರಿಯುತ್ತಿರುವ ದೃಶ್ಯ    

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಮತ್ತೆ ನಿರಂತರ ಮಳೆ ಸುರಿಯುತ್ತಿದ್ದು ‘ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಬುಧವಾರ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಾವೇರಿ, ಲಕ್ಷ್ಮಣ ತೀರ್ಥ ನದಿಗಳೂ ಸೇರಿದಂತೆ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ.

ಗುರುವಾರ ಸಹ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು ಸಾರ್ವಜನಿಕರು, ಪ್ರವಾಸಿಗರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಕೋರಿದೆ. ಅಪಾಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಸುರಕ್ಷಿತ ಪ್ರದೇಶಕ್ಕೆ ಬರಲು ಮನವಿ ಮಾಡಲಾಗಿದೆ.

ಬ್ರಹ್ಮಗಿರಿ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಸ್ನಾನಘಟ್ಟ ಮುಳುಗಿದೆ. ಭಾಗಮಂಡಲ – ಅಯ್ಯಂಗೇರಿ ರಸ್ತೆ ಮೇಲೆ ಕಾವೇರಿ ನದಿಯ ನೀರು ಹರಿಯುತ್ತಿದ್ದು ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬೇತ್ರಿಯಲ್ಲೂ ಕಾವೇರಿ ನದಿಯಲ್ಲಿ ನೀರು ಅಪಾಯಮಟ್ಟ ಮೀರಿ ಹರಿಯುತ್ತಿದೆ.

ಲಕ್ಷ್ಮಣತೀರ್ಥ ನದಿ ಪ್ರವಾಹದಿಂದ ಕಾನೂರು, ಹರಿಹರದಲ್ಲಿ ಗದ್ದೆಗಳು ಜಲಾವೃತಗೊಂಡಿವೆ. ಅಮ್ಮತ್ತಿ, ಗೋಣಿಕೊಪ್ಪಲು ನಡುವಿನ ಕೀರೆಹೊಳೆಯಲ್ಲಿ ನೀರಿನಮಟ್ಟ ಹೆಚ್ಚಾಗಿದೆ. ಮಡಿಕೇರಿ, ನಾಪೋಕ್ಲು, ಸುಂಟಿಕೊಪ್ಪ, ಪೊನ್ನಂಪೇಟೆ, ಸಿದ್ದಾಪುರ, ವಿರಾಜಪೇಟೆ, ಸೋಮವಾರಪೇಟೆಯಲ್ಲಿ ಸತತ ಮಳೆಯಾಗುತ್ತಿದೆ.

ಮತ್ತೆ ಆಘಾತ: ಕೊಡಗಿನಲ್ಲಿಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆಯಿಂದ ಪ್ರವಾಹ ಸೃಷ್ಟಿಯಾಗಿ ಅಪಾರ ಹಾನಿಯಾಗಿತ್ತು. ನದಿಗಳು ಉಕ್ಕೇರಿದ್ದರ ಪರಿಣಾಮ ಹಲವು ಮನೆಗಳೂ ಕುಸಿದಿದ್ದವು. ಕಾಫಿ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.