ADVERTISEMENT

Karnataka rains | ಸತತ ಮಳೆ, ಕೃಷಿ ಖುಷಿಗೂ ‘ತಣ್ಣೀರು’

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:12 IST
Last Updated 20 ಮೇ 2025, 20:12 IST
<div class="paragraphs"><p>ಮಣಿಪಾಲ ಸಮೀಪ ರಾಷ್ಟೀಯ ಹೆದ್ದಾರಿಯಲ್ಲಿ ಮಳೆ ನೀರಿನೊಂದಿಗೆ ಹರಿದು ಬಂದ ಕಲ್ಲುಗಳು ರಸ್ತೆಯಲ್ಲಿ ಸಂಗ್ರಹವಾಗಿದ್ದವು</p></div>

ಮಣಿಪಾಲ ಸಮೀಪ ರಾಷ್ಟೀಯ ಹೆದ್ದಾರಿಯಲ್ಲಿ ಮಳೆ ನೀರಿನೊಂದಿಗೆ ಹರಿದು ಬಂದ ಕಲ್ಲುಗಳು ರಸ್ತೆಯಲ್ಲಿ ಸಂಗ್ರಹವಾಗಿದ್ದವು

   

ದಾವಣಗೆರೆ/ಕಲಬುರಗಿ: ರಾಜ್ಯದ ಹಲವೆಡೆ ಮಂಗಳವಾರವೂ ಮಳೆಯ ಆರ್ಭಟ ಮುಂದುವರಿದಿದೆ.  ದಾವಣಗೆರೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ  ಭಾರಿ ಮಳೆ ಸುರಿಯಿತು. ಬೆಳಿಗ್ಗೆ 11 ಗಂಟೆಗೆ ಭಾರಿ ಗಾಳಿ, ಗುಡುಗು ಸಮೇತ ಆರಂಭವಾದ ಮಳೆ ಮಧ್ಯಾಹ್ನ 1 ಗಂಟೆವರೆಗೂ ರಭಸವಾಗಿ ಸುರಿಯಿತು.

ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಗೊಂಡು ಸ್ಥಳೀಯರು ಸಂಕಷ್ಟ ಅನುಭವಿಸಿದರು. ರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿದ ಪರಿಣಾಮ ವಾಹನ ಸವಾರರು  ಪರದಾಡಿದರು. ಜಿಲ್ಲೆಯ ನ್ಯಾಮತಿ, ಹರಿಹರ, ಸಾಸ್ವೆಹಳ್ಳಿ, ಸಂತೇಬೆನ್ನೂರು, ಮಲೇಬೆನ್ನೂರು, ಕಡರನಾಯ್ಕನಹಳ್ಳಿ ಭಾಗದಲ್ಲೂ ಧಾರಾಕಾರ ಮಳೆ ಸುರಿಯಿತು. ಬಸವಾಪಟ್ಟಣದಲ್ಲಿ ಸುರಿದ ಮಳೆಗೆ ಬಸ್ ನಿಲ್ದಾಣ ಜಲಾವೃತವಾಗಿತ್ತು.

ADVERTISEMENT

ಗ್ರಾಮೀಣ ಭಾಗದಲ್ಲಿ ಗಾಳಿ, ಮಳೆಯಿಂದಾಗಿ ಭತ್ತದ ಬೆಳೆ ಚಾಪೆ ಹಾಸಿದ್ದು, ರೈತರು ಆತಂಕದಲ್ಲಿದ್ದಾರೆ. ಈಗಾಗಲೇ ಬೆಳೆಯ ಕಟಾವು ನಡೆಸಿರುವ ರೈತರು, ಭತ್ತವನ್ನು ಒಣಗಿಸಲಾಗದೇ ತೇವಾಂಶದ ಸಮಸ್ಯೆ ಎದುರಿಸುತ್ತಿದ್ದಾರೆ. ತೋಟಗಾರಿಕಾ ಬೆಳೆಗಳಿಗೂ ಭಾರಿ ಹಾನಿಯಾಗಿದೆ.

ಕಲಬುರಗಿ, ಕೊಪ್ಪಳ, ರಾಯಚೂರು, ಬೀದರ್‌ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.  ರಾಯಚೂರು ಜಿಲ್ಲೆಯ ಸಿಂಧನೂರು, ದೇವದುರ್ಗ, ಲಿಂಗಸುಗೂರು, ಹಟ್ಟಿ ಚಿನ್ನದಗಣಿ, ಕವಿತಾಳದಲ್ಲಿ ಸಾಧಾರಣ ಮಳೆಯಾಗಿದೆ.

ಕೊಪ್ಪಳ ಜಿಲ್ಲೆಯಾದ್ಯಂತ ಮಂಗಳವಾರ ರಭಸದಿಂದ ಮಳೆ ಸುರಿದಿದ್ದು, ಜನರ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮಬೀರಿತು. ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಸಂಜೆ ವೇಳೆಗೆ ಜೋರಾಗಿ ಮಳೆ ಸುರಿದಿದೆ. ಕುಕನೂರು ತಾಲ್ಲೂಕಿನ ಬಳಗೇರಿ ಹಾಗೂ ಬೂದುಗುಂಪಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಳ್ಳದ ಸೇತುವೆ ರಸ್ತೆ ಕಿತ್ತು ಹೋಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹಳ್ಳದ ನೀರು ಪಕ್ಕದ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ.

ಬೀದರ್ ಜಿಲ್ಲೆಯ ಔರಾದ್ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಮಂಗಳವಾರ ಬಿರುಸಿನ ಮಳೆಯಾಗಿದೆ. ಬೀದರ್, ಭಾಲ್ಕಿ, ಹುಲಸೂರಿನ ಹಲವೆಡೆ ಸಾಧಾರಣ ಮಳೆ ಬಿದ್ದಿದೆ.

ಶಿವಮೊಗ್ಗ ವರದಿ: ಮೇ ತಿಂಗಳ ಮೂರನೇ ವಾರ ಪೂರ್ಣಗೊಳ್ಳುವ ಮುನ್ನವೇ ಮಲೆನಾಡಿನಲ್ಲಿ ವರುಣನ ಆರ್ಭಟ ಆರಂಭವಾಗಿದೆ. ಮೋಡ ಕವಿದ ವಾತಾವರಣ, ಬಿರುಸು ಮಳೆ, ಕೆಲ ಹೊತ್ತು ನೇಸರನ ಇಣುಕು ನೋಟ ಮುಂಗಾರು ಹೊತ್ತಿನ ಅನುಭವ ಆಗುತ್ತಿದೆ.

ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಸೊರಬ ತಾಲ್ಲೂಕಿನಲ್ಲಿ ಹೆಚ್ಚು ಮಳೆ ಸುರಿದಿದೆ. ಹವಾಮಾನ ಇಲಾಖೆಯ ಮಾಹಿತಿಯಂತೆ ಸೊರಬ ತಾಲ್ಲೂಕಿನ ದೊಡ್ಡಿಕೊಪ್ಪದಲ್ಲಿ ಹೆಚ್ಚು ಮಳೆ (6.85 ಸೆಂ.ಮೀ) ಬಿದ್ದಿದೆ.

ಚಿತ್ರದುರ್ಗ ವರದಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಬೆಳಿಗ್ಗೆಯಿಂದಲೂ ಮೋಡ ಮುಚ್ಚಿದ ವಾತಾವರಣವಿದ್ದು ಜಿಟಿಜಿಟಿ ಮಳೆಯಾಗಿದೆ. ಚಳಿಗಾಲದ ರೀತಿಯಲ್ಲಿ ಜನರು ಜರ್ಕಿನ್‌, ಸ್ವೆಟರ್‌ ಧರಿಸಿ ಓಡಾಡುತ್ತಿದ್ದಾರೆ. ಮೊಳಕಾಲ್ಮುರು ಪಟ್ಟಣದಲ್ಲಿ 1 ಗಂಟೆಗೂ ಮಳೆಯಾಗಿದೆ. ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಭಾಗದಲ್ಲಿ ನಿರಂತರ ಮಳೆಗೆ ತಿಪ್ಪೇರುದ್ರಸ್ವಾಮಿ ದೊಡ್ಡಕೆರೆ, ಸಣ್ಣಕೆರೆಗೆ ಅಪಾರ ಪ್ರಮಾಣದ ನೀರು ಹರಿದುಬಂದಿದೆ.

ಹೊಸದುರ್ಗ ತಾಲ್ಲೂಕಿನ ಮತ್ತೋಡು, ಶ್ರೀರಾಂಪುರ ಹೋಬಳಿಯಲ್ಲಿ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನ ತಾಳ್ಯ, ಘಟ್ಟಿ ಹೊಸಹಳ್ಳಿ ಹೊರಕೆರೆ ದೇವರಪುರ, ಚಿತ್ರಹಳ್ಳಿ ಭಾಗದ ಚೆಕ್‌ ಡ್ಯಾಂಗಳು ತುಂಬಿವೆ.

ಮಂಗಳೂರು ವರದಿ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ,
ಮೂಲ್ಕಿ ಮತ್ತು ಮೂಡುಬಿದಿರೆ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ದೊಡ್ಡ ಮರ ಬಿದ್ದು, ಸಂಚಾರಕ್ಕೆ ತೊಡಕಾಯಿತು. 

ಉಡುಪಿ ಜಿಲ್ಲೆಯಾದ್ಯಂತ ಮಂಗಳವಾರ ಮಧ್ಯಾಹ್ನದವರೆಗೆ ಧಾರಾಕಾರ ಮಳೆ ಸುರಿದಿದ್ದು, ನಗರ ಸೇರಿದಂತೆ ಹಲವೆಡೆ ರಸ್ತೆಯಲ್ಲಿ ಮಳೆ ನೀರು ಸಂಗ್ರಹವಾಗಿ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಬೆಳಿಗ್ಗೆ ಸುರಿದ ಭಾರಿ ಮಳೆಗೆ ಮಣಿಪಾಲ ಸಮೀಪದ ಐನಾಕ್ಸ್ ಬಳಿ ಮಣ್ಣು, ಕಲ್ಲುಗಳು ಮಳೆ ನೀರಿನೊಂದಿಗೆ ರಾಷ್ಟ್ರೀಯ ಹೆದ್ದಾರಿಗೆ ಹರಿದು, ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸಮೀಪದ ಅಂಗಡಿ, ಮನೆಗಳಿಗೂ ಮಳೆ ನೀರು ನುಗ್ಗಿತ್ತು. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳು ಬದಲಿ ಮಾರ್ಗಗಳಲ್ಲಿ ಸಂಚರಿಸಿದವು.

ಭಾರಿ ಗಾಳಿ ಬೀಸಿದ ಪರಿಣಾಮವಾಗಿ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಮರ ಹಾಗೂ ವಿದ್ಯುತ್‌ ಕಂಬಗಳು ನೆಲಕ್ಕುರುಳಿದವು. ಕಾರ್ಕಳ, ಕುಂದಾಪುರ, ಬೈಂದೂರು, ಹೆಬ್ರಿ ತಾಲ್ಲೂಕಿನ ವಿವಿಧೆಡೆ ಭಾರಿ ಮಳೆ ಸುರಿದಿದೆ. ಬ್ರಹ್ಮಾವರದಲ್ಲಿ ಗಾಳಿ ಮಳೆಗೆ ಹಲವೆಡೆ ಮರಗಳು ಬಿದ್ದು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೆಲವೆಡೆ ಮನೆಗಳ ಮೇಲೆ ಮರ ಬಿದ್ದ ವರದಿಯಾಗಿದೆ.

ಮೀನುಗಾರರು ಸಮುದ್ರಕ್ಕೆ ತೆರಳಬಾರದು, ಮೀನಗಾರಿಕೆಗೆ ತೆರಳಿರುವ ದೋಣಿಗಳು ದಡಕ್ಕೆ ಮರಳಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರ ಸೂಚನೆ ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಮಳೆ ಆರಂಭವಾಗಿ ಎಡೆಬಿಡದೆ ಸುರಿದಿದೆ. ಕುದುರೆಮುಖ, ಕಳಸ, ಶೃಂಗೇರಿ, ಕೊಪ್ಪ, ಕೊಟ್ಟಿಗೆಹಾರ, ಮೂಡಿಗೆರೆ, ಎನ್.ಆರ್. ಪುರ, ಚಿಕ್ಕಮಗಳೂರು ನಗರ, ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಡೂರು ಸುತ್ತಮುತ್ತ ಧಾರಾಕಾರ ಮಳೆಯಾಗಿದೆ. 

ಅರಸೀಕೆರೆಯಲ್ಲಿ 4.7 ಸೆಂ.ಮೀ, ಗಂಡಸಿ 4, ಹಳ್ಳಿಮೈಸೂರು 3.5 ಸೆಂ.ಮೀ. ಮಳೆ ದಾಖಲಾಗಿದೆ.

ಕೋಲಾರ: ಉದ್ಯಾನ, ಅಂಡರ್‌ಪಾಸ್‌ ಜಲಾವೃತ

ಬೆಂ.ಗ್ರಾಮಾಂತರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಜಿನುಗುತ್ತಿದ್ದ ಮಳೆ ಬೆಳಗಿನ ಜಾವ ಒಮ್ಮಿಂದೊಮ್ಮೆಲೆ ಆರ್ಭಟಿಸಿದೆ. ಹೂವು ಮಾರುಕಟ್ಟೆ, ತೋಟ, ಉದ್ಯಾನ, ರಸ್ತೆ, ಅಂಡರ್‌ಪಾಸ್‌ ಜಲಾವೃತವಾಗಿವೆ. ಚರಂಡಿಗಳಲ್ಲಿ ಕಸ ತುಂಬಿಕೊಂಡು ಕೊಳಚೆಯೊಂದಿಗೆ ಮಳೆ ನೀರು ರಸ್ತೆಗೆ ಹರಿದಿದೆ. ರಸ್ತೆಯಲ್ಲಿದ್ದ ಚೇಂಬರ್‌ಗಳು ತುಂಬಿ ಉಕ್ಕಿ ಹರಿದಿವೆ. 

ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು– ಮೂರು ದಿನಗಳಿಂದ ಅಬ್ಬರಿಸಿದ್ದ ಮಳೆಯ ಆರ್ಭಟ ಕೊಂಚ ತಣ್ಣಗಾಗಿದೆ. ಜಿಟಿ ಜಿಟಿ ಮಳೆ ಮುಂದುವರೆದಿದೆ. ತುಮಕೂರು ಜಿಲ್ಲೆಯಲ್ಲಿ ಬೆಳಗಿನ ಜಾವ ಸುರಿದ ಮಳೆಗೆ ನಗರದ ತಗ್ಗು ಪ್ರದೇಶದಲ್ಲಿನ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಸಮಸ್ಯೆ ಅನುಭವಿಸಿದರು.

ಶಿರಾ ತಾಲ್ಲೂಕಿನ ಬಸವನಹಳ್ಳಿ– ಕೆ.ಕೆ.ಪಾಳ್ಯ ಕೆಸರುಮಯವಾದ ರಸ್ತೆಯಲ್ಲಿ ಕೆಎಸ್ಆರ್‌ಟಿಸಿ ಬಸ್‌ ಸಿಲುಕಿ ಮೂರು ತಾಸು ಪ್ರಯಾಣಿಕರು ಪರದಾಡಿದರು. ಸ್ಥಳೀಯರು ಟ್ರ್ಯಾಕ್ಟರ್‌ ಸಹಾಯದಿಂದ ಕೆಸರಿನಿಂದ ಬಸ್‌ ಮೇಲಕ್ಕೆತ್ತಿ, ಹೊರ‌ ತಂದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ರಾಮಸ್ವಾಮಿಪಲ್ಲಿ ಗ್ರಾಮದ ಮನೆಯೊಂದರ ಚಾವಣಿ ಕುಸಿದು ಕೂಲಿ ಕೆಲಸ ಮಾಡುವ ಜಯಮ್ಮರೆಡ್ಡಿ ಎಂಬ ವೃದ್ಧೆ ತೀವ್ರವಾಗಿ ಗಾಯಗೊಂಡಿದ್ದಾರೆ. ತಲೆ ಹಾಗೂ ಎರಡು ಕಾಲುಗಳ ಮೇಲೆ ಬಂಡೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಮ್ಮರವಾರಿಪಲ್ಲಿ ಗ್ರಾಮದ ಅಪಾರ ಪ್ರಮಾಣದ ಟೊಮೆಟೊ ಹಾಗೂ ಕ್ಯಾರೆಟ್ ಬೆಳೆ ಸಂಪೂರ್ಣ ನೆಲಕಚ್ಚಿದೆ. 

ಕೋಲಾರ ಜಿಲ್ಲೆಯಲ್ಲಿ ಸತತ ಆರೇಳು ದಿನಗಳಿಂದ ಬಿಟ್ಟಬಿಟ್ಟು ಮಳೆ ಸುರಿಯುತ್ತಲೇ ಇದೆ. ಬಡಾವಣೆಗಳ ರಸ್ತೆಗಳು ಕೆಸರುಮಯವಾಗಿವೆ. ರಸ್ತೆಗಳಲ್ಲಿ ಕಾಲಿಡಲಾರದ ಸ್ಥಿತಿ ಇದೆ. ಗುಂಡಿಗಳಲ್ಲಿ ನೀರು ತುಂಬಿಕೊಂಡಿದೆ.

ತಗ್ಗು ಪ್ರದೇಶದಲ್ಲಿ ರಸ್ತೆ ಉದ್ದಕ್ಕೂ ಮಳೆ ನೀರು ನಿಂತು ಕೆಸರು ಗದ್ದೆಯಾಗಿವೆ. ಕೋಲಾರ ನಗರದ ಹೃದಯಭಾಗದಲ್ಲಿರುವ ಕುವೆಂಪು ಉದ್ಯಾನ ಕೆರೆಯಂತಾಗಿದೆ. ಸಂಪೂರ್ಣ ನೀರು ತುಂಬಿಕೊಂಡಿದ್ದು ಹರಿದು ಹೋಗಲು ಜಾಗವಿಲ್ಲದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.