ADVERTISEMENT

‘ಜಕ್ಕೂರಿನಲ್ಲಿ ಹೆಲಿಪೋರ್ಟ್ ನಿರ್ಮಾಣ’

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 22:17 IST
Last Updated 21 ಜೂನ್ 2021, 22:17 IST
ಸಭೆಯಲ್ಲಿ ಸಚಿವರಾದ ಸಿ.ಪಿ.ಯೋಗೇಶ್ವರ, ನಾರಾಯಣಗೌಡ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಸಚಿವರಾದ ಸಿ.ಪಿ.ಯೋಗೇಶ್ವರ, ನಾರಾಯಣಗೌಡ, ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.   

ಬೆಂಗಳೂರು: ‘ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಒಟ್ಟಿಗೆ 6 ಹೆಲಿಕಾಪ್ಟರ್‌ಗಳ ನಿಲುಗಡೆ ಹಾಗೂ ಹಾರಾಟಕ್ಕೆ ಅನುಕೂಲವಾಗುವಂತೆ ಅಗತ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸುವ ಯೋಜನೆಗೆ ರೂಪರೇಷೆ ಸಿದ್ಧಪಡಿಸಲಾಗಿದೆ’ಎಂದುಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ ತಿಳಿಸಿದರು.

‘ಹೆಲಿ–ಟೂರಿಸಂ’ಗೆ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರ ಬಳಸಿಕೊಳ್ಳುವ ಸಂಬಂಧ ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನಡುವೆ ಒಪ್ಪಂದ ಮಾಡಿಕೊಳ್ಳಲು ವಿಧಾನಸೌಧದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

‘ಹೊರ ರಾಜ್ಯಗಳು ಹಾಗೂ ವಿದೇಶಗಳಿಂದ ಬೆಂಗಳೂರಿಗೆ ಬರುವ ಪ್ರವಾಸಿಗರು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಿಂದ ರಾಜ್ಯದ ಇತರ ಜಿಲ್ಲೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ತೆರಳಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಹೆಲಿಟೂರಿಸಂ ಅಭಿವೃದ್ಧಿಪಡಿಸುವ ಯೋಜನೆಗಳಿಗೆ ಬಂಡವಾಳ ಹೂಡಲು ಮೂವರು ಉದ್ಯಮಿಗಳು ಮುಂದೆ ಬಂದಿದ್ದಾರೆ. ಹಂತ ಹಂತವಾಗಿ ಹೆಲಿಟೂರಿಸಂ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಮೈಸೂರು, ಕಲಬುರ್ಗಿ, ಮಂಗಳೂರು, ಬಳ್ಳಾರಿ, ಧಾರವಾಡಗಳಲ್ಲಿ ಹೆಲಿಪೋರ್ಟ್ ನಿರ್ಮಿಸಿ, ಇಲ್ಲಿಂದ ಸಂಪರ್ಕ ಕಲ್ಪಿಸಲಾಗುವುದು’ ಎಂದು ವಿವರಿಸಿದರು.

ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ,‘ಈ ಸಂಬಂಧ ಶೀಘ್ರವೇ ಸ್ಥಳ ಪರಿಶೀಲನೆ ನಡೆಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.