ADVERTISEMENT

ಹೇಮಾವತಿ– ನೇತ್ರಾವತಿ: ನದಿಗಳ ಜೋಡಣೆಗೆ ಮರುಜೀವ

ಯೋಜನೆಯ ಅಧ್ಯಯನ ಬೇಡ ಎಂದಿದ್ದ ಕರ್ನಾಟಕ ಸರ್ಕಾರ

ಮಂಜುನಾಥ್ ಹೆಬ್ಬಾರ್‌
Published 22 ಜುಲೈ 2022, 17:52 IST
Last Updated 22 ಜುಲೈ 2022, 17:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕ ಸರ್ಕಾರದ ಆಕ್ಷೇಪದ ನಡುವೆಯೂ ನೇತ್ರಾವತಿ– ಹೇಮಾವತಿ ನದಿಗಳ ಜೋಡಣೆಗೆ ಪೂರ್ವ ಕಾರ್ಯ ಸಾಧ್ಯತಾ ವರದಿಯನ್ನು ಕೇಂದ್ರ ಜಲ ಶಕ್ತಿ ಸಚಿವಾಲಯ ಸಿದ್ಧಪಡಿಸಿದ್ದು, ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ.

ಈ ಎರಡು ನದಿಗಳು,ಬೇಡ್ತಿ–ವರದಾ, ಕಾವೇರಿ– ಪೆನ್ನಾರ್ ನದಿಗಳು ಸೇರಿದಂತೆ ದೇಶದ 30 ನದಿಗಳ ಜೋಡಣೆ ಮಾಡಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ನಿರ್ದಿಷ್ಟ ಋತುವಿನಲ್ಲಿ ಉಕ್ಕಿ ಹರಿಯುವ 16 ನದಿಗಳನ್ನು ಹಾಗೂ ಹಿಮಾಲಯ ಕಣಿವೆಯ 14 ನದಿಗಳ ಜೋಡಣೆ ಮಾಡಲಾಗುತ್ತಿದೆ. ಈ ನದಿಗಳ ಜೋಡಣೆಗಾಗಿ ಕಾರ್ಯಸಾಧ್ಯತಾ ವರದಿ ಹಾಗೂ ಸಮಗ್ರ ಯೋಜನಾ ವರದಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಕೇಂದ್ರ ಜಲ ಶಕ್ತಿ ಖಾತೆಯ ರಾಜ್ಯ ಸಚಿವ ಬಿಶ್ವೇಶ್ವರ ಟುಡು ಅವರು ಲೋಕಸಭೆಗೆ ಲಿಖಿತ ಉತ್ತರ ನೀಡಿದ್ದಾರೆ.

ADVERTISEMENT

ನೇತ್ರಾವತಿ–ಹೇಮಾವತಿ ನದಿಗಳ ಜೋಡಣೆಗೆ ಪೂರ್ವ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲಾಗಿದೆ. ನೇತ್ರಾವತಿ–ಹೇಮಾವತಿ ಜೋಡಣೆಯಿಂದ 6.64 ಟಿಎಂಸಿ ಅಡಿ ನೀರನ್ನು ತಿರುವುಗೊಳಿಸಲು ಪ್ರಸ್ತಾಪಿಸಲಾಗಿದೆ. ಈ ಪ್ರದೇಶವು ಎತ್ತಿನಹೊಳೆ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಾರಣ ನೇತ್ರಾವತಿ–ಹೇಮಾವತಿ ಜೋಡಣೆ ಯೋಜನೆ ಅನುಷ್ಠಾನದ ಬಗ್ಗೆ ಅಧ್ಯಯನ ಮುಂದುವರಿಸಬಾರದು ಎಂದುರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ಕರ್ನಾಟಕ ಸರ್ಕಾರ ಪತ್ರ ಬರೆದಿದೆ. ಫೆಬ್ರುವರಿಯಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭಾ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ‘ಈ ಯೋಜನೆಯ ಅಗತ್ಯ ಇಲ್ಲ ಎಂಬುದಾಗಿ ಕೇಂದ್ರದಸಂಸ್ಥೆಗೆ ತಿಳಿಸಲಾಗಿದೆ’ ಎಂದು ಹೇಳಿದ್ದರು. ಆದರೆ, ಕೇಂದ್ರ ಸರ್ಕಾರ ಇಲ್ಲಿಯವರೆಗೆ ನಿಲುವು ಬದಲಿಸಿಲ್ಲ.

ಬೇಡ್ತಿ– ವರದಾ ನದಿ ತಿರುವು ಯೋಜನೆಗಳ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲು ರಾಷ್ಟ್ರೀಯ ಜಲ ಅಭಿವೃದ್ಧಿಗೆ ಸಂಸ್ಥೆಗೆ ಕರ್ನಾಟಕ ಸರ್ಕಾರ ಈಗಾಗಲೇ ಒಪ್ಪಿಗೆ ನೀಡಿದೆ. ಬೇಡ್ತಿ ನದಿಯಿಂದ 8.55 ಟಿಎಂಸಿ ಅಡಿ ನೀರನ್ನು ವರದಾ ನದಿಗೆ ತಿರುವುಗೊಳಿಸಲು ಪ್ರಾಥಮಿಕ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ತಯಾರಿಸಿದೆ. ಹೀರೇವಡ್ಡಟ್ಟಿ ಬಳಿ ನೀರನ್ನು ಶೇಖರಣೆ ಮಾಡಲು ಪೂರಕವಾಗಿ ಡಿಪಿಆರ್‌ ಸಿದ್ಧಪಡಿಸುವಂತೆ ಕರ್ನಾಟಕ ಸರ್ಕಾರ ಪತ್ರ ಬರೆದಿದೆ. ಈ ಯೋಜನೆಯ ಸಮಗ್ರ ಯೋಜನಾ ವರದಿಯ ಕರಡು ಸಿದ್ಧವಾಗಿದೆ. ಈ ಯೋಜನೆಯನ್ನು ವಿರೋಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಹೋರಾಟಗಳು ಆರಂಭವಾಗಿವೆ.

‘ತುಂಗಭದ್ರಾ ಎಡದಂಡೆ ಯೋಜನಾ ಪ್ರದೇಶವಾದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗೆ ನೀರನ್ನು ಒಯ್ಯುವುದು ಯೋಜನೆಯ ಉದ್ದೇಶ. ಆ ಪ್ರದೇಶದಲ್ಲಿ ಅತಿ ನೀರಾವರಿಯಿಂದಾಗಿ ಹೊಲಗಳು ಜವುಳಾಗಿದೆ. ಮತ್ತೆ ಅಲ್ಲಿಗೆ ನೀರು ಹರಿಸುವ ಅಗತ್ಯ ಇಲ್ಲ. ಅಲ್ಲಿಗೆ ಹರಿಸುವಷ್ಟು ನೀರು ಬೇಡ್ತಿ ನದಿಯಲ್ಲಿ ಸಿಗುವುದಿಲ್ಲ’ ಎಂಬುದು ಪರಿಸರ ಹೋರಾಟಗಾರರ ವಾದ.

ಗೋದಾವರಿ–ಕೃಷ್ಣಾ, ಕೃಷ್ಣಾ– ಪೆನ್ನಾರ್, ಪೆನ್ನಾರ್‌– ಕಾವೇರಿ ನದಿಗಳ ಜೋಡಣೆ ಮಾಡಲು ಕಾರ್ಯಸಾಧ್ಯತಾ ವರದಿ ಹಾಗೂ ಡಿಪಿಆರ್ ಸಿದ್ಧಪಡಿಸಲಾಗಿದೆ. ಈ ನದಿಗಳ ಜೋಡಣೆಯಿಂದ 350 ಟಿಎಂಸಿ ಅಡಿಯಷ್ಟು ನೀರು ಸಿಗಲಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.

‘ನದಿ ತಿರುಗಿಸಿ ಕೈಸುಟ್ಟುಕೊಂಡ ಬಹಳಷ್ಟು ನಿದರ್ಶನಗಳು ಜಗತ್ತಿನಲ್ಲಿ ಸಿಗುತ್ತವೆ. ರಷ್ಯಾದ ಅರಾಲ್‌ ಸಮುದ್ರ ಸೇರುವ ನದಿಗಳನ್ನು ತಿರುಗಿಸಿದ್ದರಿಂದ ಅದರ ಪರಿಸರ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಸಮುದ್ರದಲ್ಲಿ ಮೀನಿನ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ. ಎತ್ತಿನಹೊಳೆ ಯೋಜನೆಯ ಸ್ಥಿತಿ ಏನಾಗಿದೆ ಎಂಬುದು ನಮ್ಮ ಕಣ್ಣ ಮುಂದೆಯೇ ಇದೆ’ ಎಂಬುದು ಬೆಂಗಳೂರಿನಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರಅವರ ಅಭಿಮತ.

‘ಈ ಯೋಜನೆಗಳನ್ನು ಏಕಾಏಕಿ ಜಾರಿಗೊಳಿಸುವುದಿಲ್ಲ. ಸಲಹೆಗಳನ್ನು ಸ್ವೀಕರಿಸಿ ಸಾಧಕ ಬಾಧಕಗಳನ್ನು ಪರಿಶೀಲಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಆಯಾ ರಾಜ್ಯದ ಜತೆಗೆ ಒಪ್ಪಿಗೆ ಪಡೆದು ಒಪ್ಪಂದ ಮಾಡಿಕೊಂಡು ನದಿಗಳ ಜೋಡಣೆ ಮಾಡಲಾಗುತ್ತದೆ’ ಎಂದು ಸಚಿವ ಬಿಶ್ವೇಶ್ವರ ಟುಡು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.