ADVERTISEMENT

16 ವರ್ಷಗಳ ಹಿಂದಿನ ಗುಡಿಸಿಲಿಗೆ ಬೆಂಕಿ ಹಚ್ಚಿದ ಪ್ರಕರಣ: ಆರೋಪಿಗಳ ಖುಲಾಸೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 16:14 IST
Last Updated 4 ಜುಲೈ 2025, 16:14 IST
<div class="paragraphs"><p>ಹೈಕೋರ್ಟ್</p></div>

ಹೈಕೋರ್ಟ್

   

ಬೆಂಗಳೂರು: ಕಾಂಗ್ರೆಸ್‌–ಜೆಡಿಎಸ್‌ ರಾಜಕೀಯ ಜಿದ್ದಾಜಿದ್ದಿಯ ಹಿನ್ನೆಲೆಯಲ್ಲಿ ಗುಡಿಸಿಲಿಗೆ ಬೆಂಕಿ ಹಚ್ಚಿ ನಷ್ಟ ಉಂಟು ಮಾಡಿದ ಆರೋಪದಡಿ ಆರು ವರ್ಷಗಳ ಸಾದಾ ಜೈಲು ಶಿಕ್ಷೆಗೆ ಗುರಿಯಾಗಿದ್ದ ತುಮಕೂರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮತ್ತು ಸ್ಥಳೀಯ ಕಾಂಗ್ರೆಸ್‌ ಪಕ್ಷದ ಮುಖಂಡ ಶಿವರಾಮಯ್ಯ ಸೇರಿದಂತೆ ಐವರನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.

ಈ ಸಂಬಂಧ ತುಮಕೂರು ಜಿಲ್ಲಾ ಪ್ರಧಾನ ಸೆಷನ್ಸ್‌ ನ್ಯಾಯಾಲಯ ನೀಡಿರುವ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಕೊತ್ತಗೆರೆ ಶಿವರಾಮಯ್ಯ, ಶಾಣೆಗೌಡ, ಗಿರಿಗೌಡ ಅಲಿಯಾಸ್‌ ಗಿರಿ, ಬೆಟ್ಟಸ್ವಾಮಯ್ಯ ಮತ್ತು ಶಾಂತಪುರದ ರವಿ ಬಿನ್‌ ಮುದ್ದುಲಿಂಗಯ್ಯ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.

ADVERTISEMENT

ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರ, ‘ಪ್ರಾಸಿಕ್ಯೂಷನ್ ತನಿಖೆಯಲ್ಲಿ ನಿರ್ಣಾಯಕ ಲೋಪಗಳನ್ನು ಎಸಗಿದೆ. ಪ್ರಮುಖ ಸಾಕ್ಷಿಗಳ ಹೇಳಿಕೆ ಮತ್ತು ಸಾಕ್ಷ್ಯಗಳಲ್ಲಿ ವಿರೋಧಾಭಾಸಗಳಿದ್ದು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಬೇಕು’ ಎಂಬ ವಾದಾಂಶವನ್ನು ನ್ಯಾಯಪೀಠ ಪರಿಗಣಿಸಿದೆ.

1985ರಲ್ಲಿ ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಜಾಗವೊಂದರಲ್ಲಿ ನಿರ್ಮಿಸಲಾಗಿದ್ದ ಗುಡಿಸಿಲಿಗೆ ಬೆಂಕಿ ಹಚ್ಚಿ ನಷ್ಟ ಉಂಟು ಮಾಡಿದ ಆರೋಪದಡಿ ಕುಣಿಗಲ್ ತಾಲ್ಲೂಕಿನ ಬಿಮ್ಮನಕಟ್ಟೆ ನಿವಾಸಿ ಗೌರಮ್ಮ 2009ರಲ್ಲಿ ನೀಡಿದ್ದ ದೂರಿನ ಅನುಸಾರ ಮೇಲ್ಮನವಿದಾರರೂ ಸೇರಿದಂತೆ ಒಟ್ಟು 25 ಜನರ ವಿರುದ್ಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು, 6 ಜನ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 143, 149 (ಕಾನೂನು ಬಾಹಿರ ಸಭೆ), 427 (ಹಾನಿ ಉಂಟುಮಾಡುವ ಕಿಡಿಗೇಡಿತನ), ಮತ್ತು 436 (ಮನೆಯನ್ನು ನಾಶಮಾಡುವ ಉದ್ದೇಶದಿಂದ ಬೆಂಕಿ ಅಥವಾ ಸ್ಫೋಟಕ ವಸ್ತುವಿನಿಂದ ಕಿಡಿಗೇಡಿತನ ಇತ್ಯಾದಿ) ಅಡಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಸೆಷನ್ಸ್‌ ನ್ಯಾಯಾಲಯ ಮೊದಲನೇ ಆರೋಪಿಗೆ 6 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 1, 3, 4, 5, ಮತ್ತು 6ನೇ ಆರೋಪಿಗಳಿಗೆ ಒಂದು ವರ್ಷದ ಸಾದಾ ಜೈಲು ಶಿಕ್ಷೆ ವಿಧಿಸಿತ್ತು. 2ನೇ ಆರೋಪಿಯನ್ನು ಖುಲಾಸೆಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.