ಹೈಕೋರ್ಟ್
ಬೆಂಗಳೂರು: ‘ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಸಂತ್ರಸ್ತೆಯರ ಖಾಸಗಿತನದ ಹಕ್ಕಿನ ರಕ್ಷಣೆಗಾಗಿ ಅಂಥವರ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯರೇ ನಡೆಸಲು ಅವಕಾಶ ಕಲ್ಪಿಸಬೇಕು ಹಾಗೂ ಇದಕ್ಕಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಗೆ (ಬಿಎನ್‌ಎಸ್) ಸೂಕ್ತ ತಿದ್ದುಪಡಿ ತರಲು ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿದೆ.
ನಗರದಲ್ಲಿ ನಡೆದಿದ್ದ 23 ವರ್ಷದ ಮಹಿಳೆಯೊಬ್ಬರ ಮೇಲಿನ ಅತ್ಯಾಚಾರ ಆರೋಪ ಪ್ರಕರಣದ ಆರೋಪಿಯಾಗಿರುವ ಒಡಿಶಾದ 19 ವರ್ಷದ ಯುವಕ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಕೆಲವು ಸೂಚನೆಗಳನ್ನು ನೀಡಿದೆ.
‘ಹೊಸ ಕಾಯ್ದೆಯಾದ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ (ಬಿಎನ್‌ಎಸ್‌ಎಸ್) ಕಲಂ 184ಕ್ಕೆ ಸೂಕ್ತ ತಿದ್ದುಪಡಿ ಮಾಡುವವರೆಗೆ ಅತ್ಯಾಚಾರ ಸಂತ್ರಸ್ತೆಯರ ವೈದ್ಯಕೀಯ ಪರೀಕ್ಷೆಯನ್ನು ನೋಂದಾಯಿತ ಮಹಿಳಾ ವೈದ್ಯಾಧಿಕಾರಿಯೇ ಮಾಡುತ್ತಾರೆ ಎಂಬುದನ್ನು ಖಾತರಿಪಡಿಬೇಕು’ ಎಂದು ನ್ಯಾಯಪೀಠ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶಿಸಿದೆ.
‘ಬಿಎನ್ಎಸ್ಎಸ್ ಕಲಂ 184, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಯಸ್ಕ ಮಹಿಳೆಯರ ವೈದ್ಯಕೀಯ ಪರೀಕ್ಷೆಗೆ ಸಂಬಂಧಿಸಿದೆ. ಇದು ಈಗ ಹಿಂಪಡೆಯಲಾಗಿರುವ ಅಪರಾಧ ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) 164-ಎ ಕಲಂನ ಯಥಾವತ್ ನಕಲಾಗಿದೆ. ಇದು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯರಿಗೆ ಭಾರಿ ಅನ್ಯಾಯ ಉಂಟು ಮಾಡಲಿದೆ ಅಥವಾ ಅವರ ಮುಜುಗರಕ್ಕೆ ಕಾರಣವಾಗಲಿದೆ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.
‘ಬಿಎನ್ಎಸ್ಎಸ್ ಮತ್ತು ಸಿಆರ್‌ಪಿಸಿ ಎರಡರ ಕಲಂಗಳೂ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯ ನಿಬಂಧನೆಗಳಿಗೆ ವಿರುದ್ಧವಾಗಿವೆ. ಪೋಕ್ಸೊ ಕಾಯ್ದೆಯಲ್ಲಿ ಸಂತ್ರಸ್ತ ಬಾಲಕಿಯರ ವೈದ್ಯಕೀಯ ಪರೀಕ್ಷೆಯನ್ನು ಮಹಿಳಾ ವೈದ್ಯಾಧಿಕಾರಿ ಮಾತ್ರವೇ ಮಾಡಬೇಕು ಎಂದು ಹೇಳಲಾಗಿದೆ. ಅಂತೆಯೇ, ಸಂತ್ರಸ್ತೆಯರ ಕುರಿತಂತೆ ಪ್ರಕರಣದ ಪರಿಶೀಲನೆ ನಡೆಸುವ ಮತ್ತು ಅವರನ್ನು ವಿಚಾರಣೆಗೆ ಒಳಪಡಿಸುವ ಪೊಲೀಸ್ ಅಧಿಕಾರಿಗಳು, ಪ್ರಾಸಿಕ್ಯೂಟರ್‌ಗಳು, ವೈದ್ಯರು ಹಾಗೂ ಇತರೆ ವೈದ್ಯಕೀಯ ಸಿಬ್ಬಂದಿಗೆ ಈ ಕುರಿತ ಸೂಕ್ಷ್ಮದ ಬಗ್ಗೆ ಅರಿವು ಮೂಡಿಸಬೇಕು’ ಎಂದು ನ್ಯಾಯಪೀಠ ತಿಳಿಸಿದೆ.
‘ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿಯನ್ನು ಗಮನಿಸಿದರೆ, ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ಆರು ಗಂಟೆ ವೈದ್ಯಕೀಯ ಪರೀಕ್ಷೆ ನಡೆಸಿ ಶ್ರುತಪಡಿಸಲಾಗಿದೆ. ಆದಾಗ್ಯೂ, ವೈದ್ಯಾಧಿಕಾರಿಗಳು ಪ್ರಾಥಮಿಕ ವೈದ್ಯಕೀಯ ಪರಿಶೀಲನಾ ವರದಿ ನೀಡುವಲ್ಲಿ ವಿಫಲವಾಗಿದ್ದಾರೆ. ಇವುಗಳಲ್ಲಿ ಒಂದು ಖಾಸಗಿ ಮತ್ತು ಎರಡು ಸರ್ಕಾರದ ಪ್ರತಿಷ್ಠಿತ ಆಸ್ಪತ್ರೆಗಳು ಸೇರಿವೆ. ಈ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡಿರುವ ವರದಿ ಅತ್ಯಂತ ಅಸ್ಪಷ್ಟವಾಗಿದೆ. ಅದರಲ್ಲೂ ವಿಕ್ಟೋರಿಯಾ ಮತ್ತು ವಾಣಿ ವಿಲಾಸ ಆಸ್ಪತ್ರೆ ದಯನೀಯ ಸ್ಥಿತಿಯಲ್ಲಿ ಇವೆ ಎಂಬುದನ್ನು ಈ ವರದಿಗಳು ಸಾರಿ ಹೇಳುತ್ತಿವೆ. ಬೆಂಗಳೂರಿನಂತಹ ಮಹಾನಗರದಲ್ಲಿ ಇವುಗಳ ಅವಸ್ಥೆ ಗಮನಿಸಿದರೆ ಅತ್ಯಾಚಾರಕ್ಕೆ ಒಳಗಾದ ತಲ್ಲಣದ ಮನಃಸ್ಥಿತಿಯಲ್ಲಿನ ಸಂತ್ರಸ್ತೆಯರು ಈ ಪರಿಯ ವೈದ್ಯಕೀಯ ಪರೀಕ್ಷೆಯಿಂದ ಇನ್ನಷ್ಟು ದಿಗಿಲಿಗೆ ಒಳಗಾಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ನ್ಯಾಯಪೀಠ ಆಘಾತ ವ್ಯಕ್ತಪಡಿಸಿದೆ. ಸರ್ಕಾರದ ಪರವಾಗಿ ರಾಜ್ಯ ಪ್ರಾಸಿಕ್ಯೂಟರ್–1 ಬಿ.ಎ.ಬೆಳ್ಳಿಯಪ್ಪ ಹಾಗೂ ಅರ್ಜಿದಾರರ ಪರ ವಕೀಲ ಎನ್.ಎನ್.ಅಭಿಷೇಕ್ ವಾದ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.