ADVERTISEMENT

ಗ್ರಾ.ಪಂಗೆ ಆಡಳಿತಾಧಿಕಾರಿ ನೇಮಕಕ್ಕೆ ಸಮ್ಮತಿ

ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 3 ಜುಲೈ 2020, 19:18 IST
Last Updated 3 ಜುಲೈ 2020, 19:18 IST
ಹೈಕೋರ್ಟ್
ಹೈಕೋರ್ಟ್    

ಬೆಂಗಳೂರು: ಐದು ವರ್ಷಗಳ ಚುನಾಯಿತ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿರುವ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಸರ್ಕಾರದ ಕ್ರಮ ರದ್ದುಗೊಳಿಸುವಂತೆ ಕೋರಿ ಚಳ್ಳಕೆರೆ ತಾಲ್ಲೂಕು ಸೋಮಗುದ್ದಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ಸತೀಶ್ ಬಾಬು ಸೇರಿದಂತೆ ಒಟ್ಟು 16 ಜನ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿದೆ.

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಕಲಂ 8ರ ಅನುಸಾರ ಆಡಳಿತಾಧಿಕಾರಿ ನೇಮಿಸಲು ಮುಂದಾಗಿರುವ ಪಂಚಾಯಿತಿಗಳ ಅವಧಿ‌ ಈಗಾಗಲೇ ಮುಗಿದಿದೆ. ಕಲಂ 8, ಉಪ ಕಲಂ 4 ರ ಅನುಸಾರ ಒಂದು ಬಾರಿ ಆಡಳಿತಾಧಿಕಾರಿ ನೇಮಕವಾದರೆ ಅವರು ಚುನಾಯಿತ ಪ್ರತಿನಿಧಿಗಳಿಗೆ ಸಮಾನ’ ಎಂದು ನ್ಯಾಯಪೀಠ ತೀರ್ಪಿನಲ್ಲಿ ತಿಳಿಸಿದೆ.

ADVERTISEMENT

‘ಕೋವಿಡ್-19 ಇರುವ ಕಾರಣ ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸಲು ಆಡಳಿತಾಧಿಕಾರಿಗಳಿಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಮುಂದಿನ ಚುನಾಯಿತ ಪ್ರತಿನಿಧಿಗಳ ಆಯ್ಕೆ ಆಗುವತನಕ ನಮ್ಮನ್ನೇ ಮುಂದುವರಿಸಬೇಕು ಎಂಬ ಅರ್ಜಿದಾರರ ವಾದ ಸಮರ್ಥನೀಯವಲ್ಲ’ ಹೇಳಿದೆ.

‘ಪಂಚಾಯತ್ ರಾಜ್ ಕಾಯ್ದೆ ಕಲಂ 9ರ ಅನುಸಾರ ಪಂಚಾಯಿತಿಗೆ ಚುನಾಯಿತರಾದವರ ಅವಧಿ 5 ವರ್ಷ ಮಾತ್ರ. ಒಂದುವೇಳೆ ಅವಧಿ ಪೂರ್ಣಗೊಂಡ ನಂತರವೂ ಅವರನ್ನು ಮುಂದುವರಿಸಲು ಕೋರ್ಟ್ ಆದೇಶ ಮಾಡಿದ್ದೇ ಆದರೆ, ಕೋರ್ಟ್‌ ಸೂಪರ್ ಮತದಾರನಾದಂತಾಗುತ್ತದೆ. ಐದು ವರ್ಷದ ನಂತರ ಚುನಾಯಿತ ಪ್ರತಿನಿಧಿ ಮುಂದುವರಿಯುವುದನ್ನು ಸಂವಿಧಾನದ 243-ಇ ವಿಧಿ ಪ್ರತಿಬಂಧಿಸುತ್ತದೆ. ಇದಕ್ಕೆ ತದ್ವಿರುದ್ಧವಾಗಿ ಅರ್ಜಿದಾರರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ-1993ರ ಪ್ರಕರಣ 41 ಮತ್ತು 42ರಂತೆ ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾ‌ನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆ. ಈ ಸೂಚನೆ ಅನುಸಾರವೇ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ನೇಮಕಕ್ಕೆ ಕ್ರಮ ಕೈಗೊಂಡಿದ್ದಾರೆ’ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

‘ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೂಚನೆ ನೀಡಿದ್ದಾರೆಯೇ ಹೊರತು ಆದೇಶ ಹೊರಡಿಸಿಲ್ಲ. ಆದ್ದರಿಂದ, ಸರ್ಕಾರದ ಕ್ರಮದಲ್ಲಿ ಯಾವುದೇ ಕಾನೂನು ಉಲ್ಲಂಘನೆಯಾಗಿಲ್ಲ' ಎಂದು ನ್ಯಾಯಪೀಠ ಹೇಳಿದೆ. ರಾಜ್ಯ ಸರ್ಕಾರದ ಪರ ಪಿ.ಶ್ರೀನಿವಾಸಗೌಡ ವಾದ ಮಂಡಿಸಿದ್ದರು.

ಅರ್ಜಿಯಲ್ಲಿ ಏನಿತ್ತು?: ‘ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಅವಧಿ ಪೂರ್ಣಗೊಳ್ಳುತ್ತದೆ. ಇವುಗಳಿಗೆ ಆಡಳಿತಾಧಿಕಾರಿ ನೇಮಿಸಲು ಕ್ರಮ ಕೈಗೊಳ್ಳಬೇಕು' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ 2020ರ ಜೂನ್ 17ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.