ADVERTISEMENT

ಕೆಲವು ವಕೀಲರ ವರ್ತನೆಗೆ ಮುಖ್ಯ ನ್ಯಾಯಮೂರ್ತಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2020, 2:17 IST
Last Updated 12 ಸೆಪ್ಟೆಂಬರ್ 2020, 2:17 IST

ಬೆಂಗಳೂರು: ‘ಹೈಕೋರ್ಟ್‌ ನೌಕರರ ಜತೆ ದೂರವಾಣಿ ಮತ್ತು ಇ–ಮೇಲ್ ಸಂಭಾಷಣೆ ವೇಳೆ ಕೆಲ ವಕೀಲರು ನಿಂದನಾತ್ಮಕ ಭಾಷೆ ಬಳಸುತ್ತಿದ್ದಾರೆ’ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ವಿಚಾರಣೆ ಆರಂಭವಾದಾಗ ವಕೀಲ ಜಗದೀಶ್ ಶಾಸ್ತ್ರಿ ವಿರುದ್ಧ ಗರಂ ಆದ ಮುಖ್ಯ ನ್ಯಾಯಮೂರ್ತಿ, ‘ರಿಜಿಸ್ಟ್ರಾರ್ ಅವರಿ‌ಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಮತ್ತು ಸಿ.ಜೆ ಕಚೇರಿ ಕಾರ್ಯದರ್ಶಿ ಜತೆ ಮಾತನಾಡುವಾಗ ಆಕ್ರಮಣಕಾರಿ ಭಾಷೆ ಬಳಸಿರುವುದು ಸೂಕ್ತವಲ್ಲ’ ಎಂದರು.

ಮುಖ್ಯ ನ್ಯಾಯಮೂರ್ತಿಯಾಗಿ ವಕೀಲರು ಸಲ್ಲಿಸಿರುವ ಎಲ್ಲಾ ಮೆಮೊಗಳನ್ನೂ ಓದಿ ತುರ್ತು ಎಂಬಂತಹ ಅರ್ಜಿಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತಿದೆ. ‘ನಾನು ವೈಯಕ್ತಿಕವಾಗಿ 200ರಿಂದ 300 ಇ–ಮೇಲ್‌ಗಳನ್ನು ಪ್ರತಿನಿತ್ಯ ರಾತ್ರಿ 2ರಿಂದ 3 ಗಂಟೆ ತನಕ ಪರಿಶೀಲಿಸುತ್ತಿದ್ದೇನೆ. ಕೆಲವು ವಕೀಲರು ಕೂಡಲೇ ಉತ್ತರ ಬಯಸುತ್ತಿದ್ದಾರೆ. 1,200 ಸಿಬ್ಬಂದಿಯಲ್ಲಿ 101 ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದೆ. ಬೇರೆ ರಾಜ್ಯದ ಹೈಕೋರ್ಟ್‌ಗಳ ಕಾರ್ಯವೈಖರಿ ಬಗ್ಗೆ ಪರಿಶೀಲನೆ ನಡೆಸಿ, ನಂತರವೂ ಅಸಮಾಧಾನ ಇದ್ದರೆ ನನ್ನ ವಿರುದ್ಧಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೇ ದೂರು ಸಲ್ಲಿಸಬಹುದು’ ಎಂದರು. ಈ ಸಂದರ್ಭದಲ್ಲಿ ವಕೀಲ ಶಾಸ್ತ್ರಿ ಕ್ಷಮೆ ಕೋರಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.