ADVERTISEMENT

ಮರಳು ಅಕ್ರಮ | ಸಿಬಿಐ ತನಿಖೆ ಅಗತ್ಯ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 15:47 IST
Last Updated 31 ಜನವರಿ 2026, 15:47 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಎಲ್ಲ ರಾಜಕೀಯ ಪಕ್ಷಗಳ ಪ್ರಭಾವಿ ವ್ಯಕ್ತಿಗಳು ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿಯಾಗಿದ್ದಾರೆ’ ಎಂದು ಗೃಹ ಸಚಿವ ಪರಮೇಶ್ವರ ಸದನದಲ್ಲಿ ನೀಡಿದ್ದ ಹೇಳಿಕೆಯ ಮಾಧ್ಯಮ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌, ತನ್ನ ನಿಗಾದಲ್ಲಿ ಸಿಬಿಐ ಅಥವಾ ಎಸ್‌ಐಟಿ ತನಿಖೆ ನಡೆಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟಿದೆ.

ಪರಮೇಶ್ವರ ಅವರ ಹೇಳಿಕೆಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ವರದಿ ಆಧರಿಸಿ, ಹಿರಿಯ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಹಾಗೂ ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ. 

ರಾಜ್ಯದ ಗೃಹ, ಗಣಿ ಮತ್ತು ಅರಣ್ಯ ಇಲಾಖೆಗಳ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಪೀಠ, ‘ನೋಟಿಸ್‌ಗೆ ಮೂರು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿದೆ. ಅರ್ಜಿಯನ್ನು ಸೂಕ್ತ ನ್ಯಾಯಪೀಠದ ಮುಂದೆ ನಿಯೋಜನೆ ಮಾಡಲು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.

ADVERTISEMENT

ಗೃಹ ಸಚಿವರ ಹೇಳಿಕೆ:

‘ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ದೊಡ್ಡ ದಂಧೆಯಾಗಿದೆ. ಪ್ರಕರಣ ಸಂಬಂಧ ಯಾರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಯಾರನ್ನೂ ದೂಷಣೆ ಮಾಡುತ್ತಿಲ್ಲ. ಏಕೆಂದರೆ ಇದು ಅತ್ಯಂತ ಮುಜುಗರದ ಸಂಗತಿಯಾಗಿದೆ. ಈ ಸಂಬಂಧ ಸೀಮಿತವಾಗಿ ಉತ್ತರವನ್ನು ನೀಡುತ್ತಿದ್ದು, ಅನೇಕ ಪ್ರಭಾವಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಈ ವಿಷಯವನ್ನು ಚರ್ಚಿಸುವುದಕ್ಕಾಗಿ ಸಭೆ ಕರೆಯಲಾಗುವುದು’ ಎಂದು ಗೃಹ ಸಚಿವ ಜಿ.ಪರಮೇಶ್ವರ ಅವರು ಇದೇ 27ರಂದು ವಿಧಾನಸಭೆಯ ಕಲಾಪದಲ್ಲಿ ನೀಡಿರುವ ಹೇಳಿಕೆಯನ್ನು ಯಥಾವತ್ತಾಗಿ ಅರ್ಜಿಯಲ್ಲಿ ಉದ್ಧರಿಸಿದೆ.

‘ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ರಾತ್ರಿ ಸಂದರ್ಭಗಳಲ್ಲಿ ನಿರಂತರವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದರಿಂದ ಉಂಟಾಗುವ ದೂಳಿನಿಂದ ಈ ಭಾಗದ ರೈತರು ಬೆಳೆಯುವ ಬೆಳೆಗಳಿಗೆ ಹಾನಿಯಾಗಲಿದೆ ಎಂಬುದಾಗಿ ಅಲ್ಲಿಯ ರೈತರು ತಿಳಿಸಿರುವ ಕುರಿತೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಮರಳು ಗಣಿಗಾರಿಕೆ ಪ್ರದೇಶಗಳಲ್ಲಿನ ವಾಹನ ಚಲನವಲನಗಳ ಮೇಲ್ವಿಚಾರಣೆ ಮಾಡಲು ಸಿ.ಸಿ.ಟಿ.ವಿ ಕ್ಯಾಮೆರಾ ಮತ್ತು ಚೆಕ್‌ಪೋಸ್ಟ್‌ಗಳು ಇಲ್ಲದ ಕಾರಣ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ವಾಹನಗಳಿಂದ ಹಲವು ಸಾವು ನೋವುಗಳು ಸಂಭವಿಸಿವೆ’ ಎಂಬುದನ್ನು ಅರ್ಜಿಯಲ್ಲಿ ವಿವರಿಸಲಾಗಿದೆ.

ಭರವಸೆ ಕಾಣುತ್ತಿಲ್ಲ...

‘ಮಾಫಿಯಾಗಳಿಂದ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ರಾಜ್ಯದ ಗೃಹ ಸಚಿವರು ಅಸಹಾಯಕರಾಗಿದ್ದಾರೆ ಎಂದು ಭಾವಿಸುವುದಾದರೆ ಇಂತಹ ಅಕ್ರಮಗಳನ್ನು ರಾಜ್ಯದ ಆಡಳಿತ ವ್ಯವಸ್ಥೆ ತಡೆಯಬಲ್ಲದು ಎಂಬುದಕ್ಕೆ ಎಂಬ ಯಾವುದೇ ಭರವಸೆ ಕಾಣುತ್ತಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು ನ್ಯಾಯಾಲಯದ ಮೇಲ್ವಿಚಾರಣೆ ಅಗತ್ಯವಿದೆ’ ಎಂದು ನ್ಯಾಯಪೀಠ ಹೇಳಿದೆ.

‘ರಾಯಚೂರು ಜಿಲ್ಲೆಯ ಶಾಸಕಿಯೊಬ್ಬರು ತಮ್ಮ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತಿದ ಪರಿಣಾಮ ಮರಳು ಮಾಫಿಯಾಗಳು ಅವರ ಜೀವಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ. ಮರಳು ತೆಗೆಯುವುದಕ್ಕೆ ಟೆಂಡರ್‌ ಕರೆದು ಬಿಡ್‌ಗಳನ್ನು ಆಹ್ವಾನಿಸಿದ್ದರೂ ಅದರ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಮರಳು ಗಣಿಗಾರಿಕೆ ನಡೆಸುವುದನ್ನು ಕಾನೂನು ಬದ್ಧಗೊಳಿಸಲು ಬಯಸದ ದೊಡ್ಡದೊಡ್ಡ ಕುಳಗಳು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಮರಳು ಗಣಿಗಾರಿಕೆಗೆ ಟೆಂಡರ್‌ ಕರೆದು ನಿಯಮಬದ್ಧವಾಗಿ ನಡೆಸಿದಲ್ಲಿ ಅದರಿಂದ ಬರುವ ಹಣ ಖಜಾನೆಗೆ ಹೋಗುತ್ತದೆ. ಆಗ ಈ ಮಾಫಿಯಾಗಳು ತಮ್ಮ ಅಕ್ರಮ ಗಳಿಕೆಯನ್ನು ಕಳೆದುಕೊಳ್ಳಲಿವೆ’ ಎಂಬ ಮಾಧ್ಯಮ ವರದಿಗಳನ್ನು ನ್ಯಾಯಪೀಠ ಉಲ್ಲೇಖಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.