ADVERTISEMENT

ಜೈಲಿನಲ್ಲಿ ಕೋವಿಡ್ ಪ್ರಕರಣ: ವಿವರ ಸಲ್ಲಿಸಲು ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 20:30 IST
Last Updated 3 ಸೆಪ್ಟೆಂಬರ್ 2020, 20:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ಕುರಿತು ವಿವರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್‌ ಕಾಳೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಸೋಂಕಿತರಿಗೆ ಚಿಕಿತ್ಸೆ ನೀಡಲು ಜೈಲಿನಲ್ಲಿರುವ ಸೌಲಭ್ಯಗಳೇನು’ ಎಂದು ಪ್ರಶ್ನಿಸಿದೆ.

‘ಪ್ರತಿ ಜೈಲಿನಲ್ಲಿ ಪತ್ತೆಯಾದ ಕೋವಿಡ್ ಪ್ರಕರಣಗಳ ಸಂಖ್ಯೆ, ಕಾರಾಗೃಹಗಳಲ್ಲಿ ಪ್ರತ್ಯೇಕವಾಗಿ ಇರಲು ಸರಿಯಾದ ಸೌಲಭ್ಯಗಳು ಲಭ್ಯವಿದೆಯೇ, ರೋಗಲಕ್ಷಣಗಳ ಇರುವ ಕೈದಿಗಳಗೆ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಲಾಗಿದೆಯೇ ಎಂಬುದರ ಕುರಿತು ವಿವರ ಸಲ್ಲಿಸಬೇಕು‘ ಎಂದು ತಿಳಿಸಿದೆ.

ADVERTISEMENT

‘ವಿಚಾರಣೆಗೆ ಒಳಪಡುವ ಅಥವಾ ಶಿಕ್ಷೆಗೆ ಒಳಗಾದ ಕೈದಿಯನ್ನು ಜೈಲಿಗೆ ಕರೆ ತರುವ ಮುನ್ನ ಕೋವಿಡ್ ಪರೀಕ್ಷೆ ನಡೆಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದಾರೂ ನೀತಿ ಇದೆಯೇ ಎಂಬುದರ ಕುರಿತು ಸೆ.21ರೊಳಗೆ ಅಫಿಡವಿಟ್ ಸಲ್ಲಿಸಬೇಕು’ ಎಂದು ಪೀಠ ತಿಳಿಸಿದೆ.

‘ರೋಗದ ಲಕ್ಷಣ ಇರುವ ಕೈದಿಗಳನ್ನು ಕಾರಾಗೃಹದಲ್ಲಿ ಪ್ರತ್ಯೇಕವಾಗಿ ಇರಿಸಬೇಕು. ಎಲ್ಲರೊಂದಿಗೆ ಸೇರಲು ನಿರ್ಬಂಧಿಸಬೇಕು’ ಎಂಬ ಸುಪ್ರೀಂ ಕೋರ್ಟ್‌ ಆದೇಶವನ್ನು ಅರ್ಜಿದಾರರು ಉಲ್ಲೇಖಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.