ADVERTISEMENT

ಈಗಲ್‌ಟನ್‌ ರೆಸಾರ್ಟ್‌ಗೆ ₹982 ಕೋಟಿ ದಂಡ

77 ಎಕರೆ ಸರ್ಕಾರಿ ಜಾಗ ಒತ್ತುವರಿ : ದಂಡ ವಿಧಿಸಲು ಹೈಕೋರ್ಟ್ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 20:30 IST
Last Updated 21 ಆಗಸ್ಟ್ 2021, 20:30 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಸರ್ಕಾರಿ ಜಾಗ ಒತ್ತುವರಿ ಮಾಡಿ ಬಿಡದಿ ಬಳಿ ಈಗಲ್‌ಟನ್ ಗಾಲ್ಫ್ ರೆಸಾರ್ಟ್‌ ನಿರ್ಮಾಣ ಮಾಡಿರುವ ಚಾಮುಂಡೇಶ್ವರಿ ಬಿಲ್ಡ್ ಟೆಕ್‌ ಕಂಪನಿಗೆ ₹982 ಕೋಟಿ ದಂಡ ವಿಧಿಸಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

77 ಎಕರೆ 19 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಮಾಡಿರುವ ಆರೋಪದಲ್ಲಿ ಸರ್ಕಾರ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಚಾಮುಂಡೇಶ್ವರಿ ಬಿಲ್ಡ್‌ ಟೆಕ್ ಕಂಪನಿ ಸಲ್ಲಿಸಿದ್ದ ತಕರಾರ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ಅವರಿದ್ದ ಪೀಠ ವಿಚಾರಣೆ ನಡೆಸಿತು.

ರಾಜ್ಯ ಸಚಿವ ಸಂಪುಟವು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ನಿಗದಿ ಮಾಡಿದೆ. ಪ್ರಸ್ತುತ ಮಾರುಕಟ್ಟೆ ದರ ₹12.25 ಕೋಟಿ ಆಗಿದ್ದು, ಅದನ್ನು ಒಪ್ಪುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.

ADVERTISEMENT

‘ಕಂಪನಿಯು ಎರಡು ದಶಕಗಳಿಂದ ಸರ್ಕಾರದ ಭೂಮಿಯಲ್ಲಿ ಅನಧಿಕೃತವಾಗಿ ಸ್ವಾಧೀನದಲ್ಲಿದೆ. ಜತೆಗೆ ದಶಕಗಳ ಕಾಲ ಭೂ ವ್ಯಾಜ್ಯ ಮುಂದುವರಿಸಿಕೊಂಡು ಬಂದಿದೆ. ಇದು ಸರಿಯಾದ ಕ್ರಮ ಅಲ್ಲ. ಅಕ್ರಮ ಮುಚ್ಚಿಕೊಳ್ಳಲು ಈ ವ್ಯಾಜ್ಯವನ್ನು ಕಂಪನಿ ಅಸ್ತ್ರವಾಗಿ ಬಳಸಿಕೊಂಡಿದೆ’ ಎಂದು ಪೀಠ ಅಭಿಪ್ರಾಯಪಟ್ಟಿತು.

‘ಸಾರ್ವಜನಿಕ ಆಸ್ತಿಯನ್ನು ಅಕ್ರಮವಾಗಿ ಸ್ವಾಧೀನ ಮಾಡಿಕೊಂಡು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ ದುರುದ್ದೇಶದಿಂದ ಈ ಅರ್ಜಿ ಸಲ್ಲಿಸಲಾಗಿದೆ. ಇದು ಕಾನೂನು ಪ್ರಕ್ರಿಯೆಯ ದುರ್ಬಳಕೆ’ ಎಂದು ತಿಳಿಸಿದ ಪೀಠ, ಕಂಪನಿಯ ಅರ್ಜಿಯನ್ನು ವಜಾಗೊಳಿಸಿತು.

ವಿಶ್ವ ದರ್ಜೆಯ ಗಾಲ್ಫ್ ರೆಸಾರ್ಟ್ ನಿರ್ಮಾಣಕ್ಕೆ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಕಂಪನಿ ರಾಮನಗರದ ಬಿಡದಿ ಬಳಿ 1996ರಲ್ಲಿ 400 ಎಕರೆ ಜಮೀನು ಖರೀದಿಸಿತ್ತು. ಸುತ್ತಮುತ್ತಲಿನ 77 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿತ್ತು. ಒತ್ತುವರಿ ಮಾಡಿಕೊಂಡಿರುವ ಜಮೀನಿಗೆ ₹982 ಕೋಟಿ ನಿಗದಿ ಮಾಡಿ ರಾಮನಗರ ಜಿಲ್ಲಾಧಿಕಾರಿ 2017ರಲ್ಲಿ ನೋಟಿಸ್ ನೀಡಿದ್ದರು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.