ADVERTISEMENT

ಎಂಜಿನಿಯರ್‌ ನಾಪತ್ತೆ ಪ್ರಕರಣ: ಸಮಗ್ರ ವರದಿ ಸಲ್ಲಿಕೆಗೆ ಹೈಕೋರ್ಟ್‌ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2024, 15:51 IST
Last Updated 19 ಫೆಬ್ರುವರಿ 2024, 15:51 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬಿಡದಿಯ ನಿತ್ಯಾನಂದ ಧ್ಯಾನಪೀಠದ ಆಶ್ರಮದಿಂದ ಕಾಣೆಯಾಗಿದ್ದಾರೆ ಎನ್ನಲಾದ ಸಾಫ್ಟ್‌ವೇರ್‌ ಎಂಜಿನಿಯರ್‌ ಕೃಷ್ಣಕುಮಾರ್ ಪಾಲ್‌ ಇರುವಿಕೆಯ ಬಗ್ಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

‘ನನ್ನ ಮಗ ಕೃಷ್ಣಕುಮಾರ್ ಪಾಲ್ ನಾಪತ್ತೆಯಾಗಿದ್ದಾನೆ’ ಎಂದು ರಾಂಚಿಯ ದಯಾಶಂಕರ್ ಪಾಲ್ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಉಮೇಶ್ ಎಂ.ಅಡಿಗ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಬಿ.ಎ.ಬೆಳ್ಳಿಯಪ್ಪ ಅವರು, ‘ಪೊಲೀಸರು ಕೃಷ್ಣಕುಮಾರ್ ಅವರ ಬಗ್ಗೆ ಇರುವಿಕೆಯ ಬಗ್ಗೆ ಬಿಡದಿಯ ನಿತ್ಯಾನಂದ ಪೀಠಕ್ಕೆ ತೆರಳಿ ಖುದ್ದು  ಪರಿಶೀಲನೆ ನಡೆಸಿದ್ದಾರೆ. ಆದರೆ, ಕೃಷ್ಣಕುಮಾರ್ ಬಿಡದಿಯ ಧ್ಯಾನಪೀಠದಲ್ಲಿ ಇಲ್ಲ. ಅವರ ಇ–ಮೇಲ್‌ಗೆ ನಡೆಸಲಾದ ಸಂವಹನದಲ್ಲಿ; ಈ ಮೊದಲು ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂಬ ಉತ್ತರ ಬಂದಿತ್ತು. ನಂತರ ಬಂದಿಲ್ಲ. ಆಶ್ರಮದಲ್ಲಿ ಇರುವವರಿಗೂ ಅವರು ಎಲ್ಲಿದ್ದಾರೆ ಎನ್ನುವ ಮಾಹಿತಿ ಇಲ್ಲ’ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಕರಣದ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮಾರ್ಚ್‌ 4ಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ರಾಜಕುಮಾರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.