ADVERTISEMENT

ಪ್ರಜ್ವಲ್ ಅನರ್ಹ: ಜೆಡಿಎಸ್‌ ‘ಶಕ್ತಿ ಕೇಂದ್ರ’ದಲ್ಲಿ ತಲ್ಲಣ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 21:01 IST
Last Updated 1 ಸೆಪ್ಟೆಂಬರ್ 2023, 21:01 IST
   

ಬೆಂಗಳೂರು: ಹಾಸನ ಲೋಕಸಭಾ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಆಯ್ಕೆಯನ್ನೇ ಅನೂರ್ಜಿತಗೊಳಿಸಿ ಹೈಕೋರ್ಟ್‌ ನೀಡಿರುವ ತೀರ್ಪು ಜೆಡಿಎಸ್‌ ‘ಶಕ್ತಿ ಕೇಂದ್ರ’ದಲ್ಲಿ ತಲ್ಲಣ ಸೃಷ್ಟಿಸಿದೆ. ಇಡೀ ಕುಟುಂಬವೇ ಕಾನೂನು ಕ್ರಮದ ಸುಳಿಗೆ ಸಿಲುಕಿರುವುದು ಪಕ್ಷದ ನಾಯಕರ ಚಿಂತೆಯನ್ನು ಹೆಚ್ಚಿಸಿದೆ.

ಪ್ರಜ್ವಲ್‌ ವಿರುದ್ಧ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದ ಎ. ಮಂಜು ಈಗ ಜೆಡಿಎಸ್ ಶಾಸಕ. ತಮ್ಮೆದುರು ಸ್ಪರ್ಧಿಸಿ ಆಯ್ಕೆಯಾಗಿದ್ದ ಪ್ರಜ್ವಲ್‌ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿರುವ ಮಂಜು, ಅದೇ ಚುನಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪದಡಿ ದೋಷಿ ಎಂದು ಹೈಕೋರ್ಟ್‌ ಹೇಳಿದೆ.

ಪ್ರಜ್ವಲ್‌ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದ ಜೆಡಿಎಸ್‌ ಶಾಸಕ ಎಚ್‌.ಡಿ. ರೇವಣ್ಣ ಮತ್ತು ವಿಧಾನ ಪರಿಷತ್‌ ಹಾಲಿ ಸದಸ್ಯ ಸೂರಜ್‌ ರೇವಣ್ಣ ಕೂಡ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಹೈಕೋರ್ಟ್‌ ಸಾರಿದೆ. ಜತೆಯಲ್ಲೇ ಮೂವರ ವಿರುದ್ಧವೂ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿರುವುದರಿಂದ ಒಂದೇ ಪ್ರಕರಣದಲ್ಲಿ ಜೆಡಿಎಸ್‌ನ ನಾಲ್ವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಹಾಸನ ಜಿಲ್ಲೆಯ ರಾಜಕಾರಣದ ಮೇಲೆ ಬಲವಾದ ಹಿಡಿತ ಸಾಧಿಸಿರುವ ರೇವಣ್ಣ ಕುಟುಂಬ ಈ ಪ್ರಕರಣದಿಂದ ತೀವ್ರ ಇಕ್ಕಟ್ಟಿಗೆ ಸಿಲುಕಿದೆ. ಕಾನೂನು ಹೋರಾಟದಲ್ಲಿ ಗೆಲುವು ಸಿಗದಿದ್ದರೆ ಒಂದೇ ಕುಟುಂಬದ ಮೂವರು ಚುನಾವಣಾ ರಾಜಕಾರಣದಿಂದ ದೂರ ಸರಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದಾಗಿ ಜೆಡಿಎಸ್‌ನ ‘ಶಕ್ತಿ ಕೇಂದ್ರ’ದಲ್ಲಿಆತಂಕ ಮನೆಮಾಡಿದೆ.

ಅಖಾಡಕ್ಕಿಳಿದ ರೇವಣ್ಣ: ಹೈಕೋರ್ಟ್‌ ತೀರ್ಪು ಪ್ರಕಟವಾದ ಬೆನ್ನಲ್ಲೇ ಕುಟುಂಬವನ್ನು ಕಾನೂನು ಕ್ರಮದ ಸಂಕಷ್ಟದಿಂದ ಪಾರುಮಾಡಲು ರೇವಣ್ಣ ಅಖಾಡಕ್ಕಿಳಿದಿದ್ದಾರೆ. ಹಿರಿಯ ವಕೀಲರು ಮತ್ತು ಪಕ್ಷದ ಕೆಲವು ಪ್ರಮುಖರ ಜತೆ ಚರ್ಚಿಸಿದ್ದಾರೆ. ಪಕ್ಷದ ವರಿಷ್ಠರೂ ಆಗಿರುವ ತಮ್ಮ ತಂದೆ ಎಚ್‌.ಡಿ. ದೇವೇಗೌಡ ಅವರೊಂದಿಗೆ ಚರ್ಚಿಸಿ, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸುವ ನಿರ್ಧಾರವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.