ADVERTISEMENT

ವೈದ್ಯಕೀಯ ಪದವಿ ಕೋರ್ಸ್: ಮೊದಲ ವರ್ಷದ ಪ್ರವೇಶಕ್ಕೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2023, 15:56 IST
Last Updated 14 ಅಕ್ಟೋಬರ್ 2023, 15:56 IST
ಪ್ರತಿಭಟನೆ ಕೈಬಿಟ್ಟು ಸೇವೆಗೆ ಮರಳಲು ವೈದ್ಯರಿಗೆ ಹೈಕೋರ್ಟ್ ನಿರ್ದೇಶನ
ಪ್ರತಿಭಟನೆ ಕೈಬಿಟ್ಟು ಸೇವೆಗೆ ಮರಳಲು ವೈದ್ಯರಿಗೆ ಹೈಕೋರ್ಟ್ ನಿರ್ದೇಶನ   

ಬೆಂಗಳೂರು: ಕೌನ್ಸೆಲಿಂಗ್ ಸುತ್ತುಗಳಲ್ಲಿ ಮೆರಿಟ್ ಆಧಾರದಲ್ಲಿ ಅರ್ಹತೆ ಪಡೆದಿದ್ದರೂ ಎಂಬಿಬಿಎಸ್ ಮೊದಲ ವರ್ಷದ ಪ್ರವೇಶ ನಿರಾಕರಿಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕ್ರಮವನ್ನು ಪ್ರಶ್ನಿಸಿ‌ ಮೂವರು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.

"ಪ್ರವೇಶ ನೀಡುವಂತೆ ಕೆಇಎಗೆ ನಿರ್ದೇಶಿಸಬೇಕು" ಎಂದು ಕೋರಿ ನಗರದ ಸೈಯ್ಯದ್ ಅದಿಲ್ ಬಿಲಾಸ್, ಪೂರ್ಣವ ಸೆಂಥಿಲ್ ಹಾಗೂ ಎಂ.ಸಾಧನಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಿದ ವಿಶೇಷ ವಿಭಾಗೀಯ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಎ.ವಿಜಯಕುಮಾರ್ ಪಾಟೀಲ್ ಈ ಕುರಿತಂತೆ ಆದೇಶಿಸಿದ್ದಾರೆ.

"ನಾವು ನೀಟ್ ಪರೀಕ್ಷೆ ಪಾಸಾಗಿ ವೈದ್ಯಕೀಯ ಪದವಿ ಕೋರ್ಸ್ ಗೆ ಪ್ರವೇಶ ಪಡೆಯಲು ಅರ್ಹರಾಗಿದ್ದೆವು. ಕೆಇಎ ನಡೆಸಿದ್ದ ಮೊದಲ ಸುತ್ತಿನಲ್ಲೇ ಮೆರಿಟ್ ಆಧಾರದಲ್ಲಿ ಆಯ್ಕೆಯಾಗಿದ್ದೆವು‌. ಆದರೆ, ಕಾಲೇಜಿಗೆ ಪ್ರವೇಶ ಪಡೆಯಲು ಆಗಿಲ್ಲ" ಎಂದು ಅರ್ಜಿದಾರರು ಆಕ್ಷೇಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ADVERTISEMENT

ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಅವರ ವಾದ ಮನ್ನಿಸಿದ ನ್ಯಾಯಪೀಠ, "ಮೂವರೂ ವಿದ್ಯಾರ್ಥಿಗಳಿಗೆ ಎಂ.ಎಸ್. ರಾಮಯ್ಯ ಕಾಲೇಜಿನಲ್ಲಿ ಪ್ರವೇಶ ಪಡೆಯಲು ಅನುಮತಿ ನೀಡಬೇಕು" ಎಂದು ಕೆಇಎಗೆ ನಿರ್ದೇಶಿಸಿದೆ. ಅಂತೆಯೇ, "ಈ ಆದೇಶವು ಅರ್ಜಿಯ ಅಂತಿಮ ವಿಚಾರಣೆ ನಂತರ ಹೊರಬರುವ ತೀರ್ಪಿಗೆ ಒಳಪಟ್ಟಿರುತ್ತದೆ" ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.