ಬೆಂಗಳೂರು: ‘ಸ್ಥಳೀಯ ಶಾಸಕರ ಸಲಹೆ ಅಥವಾ ಅವರ ಶಿಫಾರಸಿನ ಮೇರೆಗೆ ಸರ್ಕಾರಿ ಅಧಿಕಾರಗಳ ವರ್ಗಾವಣೆ ಮಾಡುವುದರಿಂದ ಅಂತಹ ವರ್ಗಾವಣೆಗೆ ಯಾವುದೇ ಕಾನೂನಾತ್ಮಕ ಅಡ್ಡಿ ಉಂಟಾಗುವುದಿಲ್ಲ’ ಎಂದು ಹೈಕೋರ್ಟ್ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
ಈ ಸಂಬಂಧ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಗ್ರೇಡ್-1 ತಹಶೀಲ್ದಾರ್ ಎಸ್.ವೆಂಕಟೇಶಪ್ಪ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ನೇತೃತ್ವದ ವಿಭಾಗೀಯ ನ್ಯಾಯಪೀಠ, ಈ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ.
ಎಸ್.ವೆಂಕಟೇಶಪ್ಪ ಅವರನ್ನು ಬಂಗಾರಪೇಟೆಯ ತಹಶೀಲ್ದಾರ್ ಆಗಿ 2024ರ ಜುಲೈ 31ರಂದು ವರ್ಗಾವಣೆ ಮಾಡಲಾಗಿತ್ತು. ಅದೇ ವರ್ಷದ ಡಿಸೆಂಬರ್ 31ರಂದು, ಅವರನ್ನು ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಈ ವರ್ಗಾವಣೆಯನ್ನು ಪ್ರಶ್ನಿಸಿ ವೆಂಕಟೇಶಪ್ಪ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ಮೊರೆ ಹೋಗಿದ್ದರು. ‘ನನ್ನ ವರ್ಗಾವಣೆ ಅಕಾಲಿಕ ಮತ್ತು ವರ್ಗಾವಣೆ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ’ ಎಂದು ಪ್ರತಿಪಾದಿಸಿದ್ದರು. ಆದರೆ, ಕೆಎಸ್ಎಟಿ ಅವರ ಮನವಿಯನ್ನು ತಿರಸ್ಕರಿಸಿತ್ತು.
ಕೆಎಸ್‌ಎಟಿ ಆದೇಶವನ್ನು ಪ್ರಶ್ನಿಸಿ ವೆಂಕಟೇಶಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ರಿಟ್ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ, ಮೊಹಮ್ಮದ್ ಮಸೂದ್ ಅಹ್ಮದ್ ವರ್ಸಸ್ ಉತ್ತರ ಪ್ರದೇಶ ರಾಜ್ಯದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸುವ ಮೂಲಕ ಅರ್ಜಿ ವಜಾಗೊಳಿಸಿ ಶಾಸಕರ ಶಿಫಾರಸನ್ನು ಎತ್ತಿಹಿಡಿದಿದೆ. ‘ನ್ಯಾಯಮಂಡಳಿ ಹೊರಡಿಸಿದ ಆದೇಶದಲ್ಲಿ ನಮಗೆ ಯಾವುದೇ ದೋಷ ಅಥವಾ ಕಾನೂನುಬಾಹಿರ ಅಂಶ ಕಂಡುಬಂದಿಲ್ಲ’ ಎಂದು ತಿಳಿಸಿದೆ.
‘ಜನರು ತಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳ ಮುಂದೆ ತಮ್ಮ ತಮ್ಮ ಅಹವಾಲು, ಕುಂದುಕೊರತೆಗಳನ್ನು ವ್ಯಕ್ತಪಡಿಸುವುದು ಸ್ವಾಭಾವಿಕ. ತಮ್ಮ ಕೆಲಸಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದ ಸರ್ಕಾರಿ ನೌಕರರ ವರ್ಗಾವಣೆಗೆ ವಿನಂತಿಸುವುದೂ ಅಷ್ಟೇ ಸಹಜ. ಇಂತಹ ಸಂದರ್ಭದಲ್ಲಿ ದೂಷಣೆ ಹೊತ್ತ ಸರ್ಕಾರಿ ನೌಕರರನ್ನು ವರ್ಗಾವಣೆಗೆ ಶಿಫಾರಸು ಮಾಡುವುದು ಜನಪ್ರತಿನಿಧಿಯ ಕರ್ತವ್ಯ. ಅಂತೆಯೇ, ಇದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಯಲ್ಲಿರುವ ಅಂಶ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಸಾಲುಗಳು ಈ ಸಂದರ್ಭದಲ್ಲಿ ಮನನೀಯ’ ಎಂದು ನ್ಯಾಯಪೀಠ ಹೇಳಿದೆ.
‘ಹಾಲಿ ಪ್ರಕರಣದಲ್ಲಿ ಅರ್ಜಿದಾರರ ವರ್ಗಾವಣೆ ಅಕಾಲಿಕವಾಗಿದ್ದರೂ, ಅವರು ತಮ್ಮ ಕಚೇರಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿರಲಿಲ್ಲ ಮತ್ತು ಸಾರ್ವಜನಿಕ ಕುಂದು ಕೊರತೆಗಳಿಗೆ ಸರಿಯಾಗಿ ಸ್ಪಂದಿಸುತ್ತಿರಲಿಲ್ಲ ಎಂದು ಶಾಸಕರು, ಕಂದಾಯ ಸಚಿವರಿಗೆ ಬರೆದ ಪತ್ರದಲ್ಲಿ ನಮೂದಿಸಿರುವುದು ಗಮನಾರ್ಹ. ಸಾರ್ವಜನಿಕರ ಕುಂದು ಕೊರತೆಗಳನ್ನು ಪರಿಹರಿಸುವಲ್ಲಿ ವೆಂಕಟೇಶಪ್ಪ ವಿಫಲರಾಗಿದ್ದಾರೆ ಎಂದು ಉಲ್ಲೇಖಿಸಿ ಶಾಸಕರು ಬರೆದಿರುವುದನ್ನು ಪರಿಗಣಿಸಿಯೇ ಮುಖ್ಯಮಂತ್ರಿಗಳು ಅವರ ವರ್ಗಾವಣೆಗೆ ಅನುಮೋದನೆ ನೀಡಿರುವುದು ಸ್ಪಷ್ಟವಾಗಿದೆ’ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.