ADVERTISEMENT

ಅವಧಿ ಮುಕ್ತಾಯದ ಹಂತದಲ್ಲೂ ಅವಕಾಶವಿದೆ: ಹೈಕೋರ್ಟ್‌

‍ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 16:01 IST
Last Updated 10 ಫೆಬ್ರುವರಿ 2026, 16:01 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಗ್ರಾಮ ಪಂಚಾಯಿತಿಯ ಚುನಾಯಿತ ಸದಸ್ಯರ ಅವಧಿ ಮುಕ್ತಾಯದ ಹಂತದಲ್ಲಿಯೂ ಅವಿಶ್ವಾಸ ನಿರ್ಣಯ ಮಂಡನೆಗೆ ಅನುಮತಿ ನೀಡಬಹುದು. ಇದರಿಂದ ಚುನಾಯಿತ ಪದಾಧಿಕಾರಿಗಳು ಉಳಿದ ಅಧಿಕಾರಾವಧಿ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವುದಿಲ್ಲ’ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಈ ಸಂಬಂಧ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎನ್‌.ಶ್ರೀನಿವಾಸ್‌ ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ‘ಗ್ರಾಮ ಪಂಚಾಯಿತಿ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ದಿನಾಂಕದಿಂದ 15 ತಿಂಗಳ ಆರಂಭಿಕ ಅವಧಿಯಲ್ಲಿ ಮಾತ್ರ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿಲ್ಲ. ಆದರೆ, 15 ತಿಂಗಳ ಬಳಿಕ ಯಾವುದೇ ಸಂದರ್ಭದಲ್ಲಿ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿರಲಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ADVERTISEMENT

‘ಹಣಕಾಸಿನ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧದ ಆರೋಪಗಳ ಬಗ್ಗೆ ಪರಿಶೀಲನೆ ನಡೆಸಲು ಕಡತವನ್ನು ಸಕ್ಷಮ ಪ್ರಾಧಿಕಾರಕ್ಕೆ ರವಾನಿಸಬೇಕು. ಜತೆಗೆ, ಆದೇಶದ ಪ್ರತಿ ಲಭ್ಯವಾದ ಏಳು ದಿನಗಳ ಒಳಗಾಗಿ ಆರೋಪಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯಿತಿಗೆ ತಾಕೀತು ಮಾಡಿದೆ.

ಪ್ರಕರಣವೇನು?: ಚಲ್ದಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುವ ಸಂಬಂಧ ಕೆಲ ಸದಸ್ಯರು ಮನವಿ ಸಲ್ಲಿಸಿದ್ದರು. ಈ ಮನವಿ ಆಧರಿಸಿ ಉಪ ವಿಭಾಗಾಧಿಕಾರಿ, 2026ರ ಜನವರಿ 7ರಂದು ಅವಿಶ್ವಾಸ ನಿರ್ಣಯಕ್ಕೆ ಸಭೆ ನಡೆಸುವ ಹಿನ್ನೆಲೆಯಲ್ಲಿ 2025ರ ಡಿಸೆಂಬರ್ 20ರಂದೇ ನೋಟಿಸ್‌ ಜಾರಿ ಮಾಡಿದ್ದರು. ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿದ್ದ ಕ್ರಮವನ್ನು ಪ್ರಶ್ನಿಸಲಾಗಿತ್ತು.

ಕೋರಿಕೆ: ‘ಪಂಚಾಯಿತಿಯಲ್ಲಿ ಲಭ್ಯವಿರುವ ₹65 ಲಕ್ಷ ಅನುದಾನ ಬಿಡುಗಡೆಗೆ ಕೆಲವು ಸದಸ್ಯರು ಮನವಿ ಮಾಡಿದ್ದರು. ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ಕಾರಣಕ್ಕಾಗಿ ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ನೋಟಿಸ್‌ ನೀಡಲಾಗಿದೆ. ನಾನು 2020ರ ಡಿಸೆಂಬರ್ 30ರಂದು ಆಯ್ಕೆಯಾಗಿದ್ದು, ಅವಧಿ ಪೂರ್ಣಗೊಳ್ಳುವ ಹಂತದಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸದಸ್ಯರು ಮುಂದಾಗಿದ್ದಾರೆ. ಆದ್ದರಿಂದ, ನೋಟಿಸ್‌ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.