ADVERTISEMENT

ಜೈಲುಗಳಲ್ಲಿ ಸಾವು: ವರದಿ ಸಲ್ಲಿಸಲು ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 17:20 IST
Last Updated 19 ಜನವರಿ 2022, 17:20 IST

ಬೆಂಗಳೂರು: ’ರಾಜ್ಯದ ಕಾರಾಗೃಹಗಳಲ್ಲಿ ಅಸ್ವಾಭಾವಿಕವಾಗಿ ಸಾವನ್ನಪ್ಪಿದ ವಿಚಾರಣಾಧೀನ ಕೈದಿಗಳ ಅವಲಂಬಿತರಿಗೆ ಪರಿಹಾರ ನೀಡಿರುವ ಕುರಿತಂತೆ ಸಮಗ್ರವಾದ ವಸ್ತುಸ್ಥಿತಿ ವರದಿ ಸಲ್ಲಿಸಿ‘ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಸಂಬಂಧ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ 2017ರಲ್ಲಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರಿ ವಕೀಲರು,’ವಿಚಾರಣಾಧೀನ ಕೈದಿಗಳು ಅಸ್ವಾಭಾವಿಕ ಸಾವನ್ನಪ್ಪಿದಲ್ಲಿ ಅವರ ಅವಲಂಬಿತರಿಗೆ ಈಗಾಗಲೇ ಪರಿಹಾರ ನೀಡಲಾಗುತ್ತಿದೆ. 2020ರ ನಂತರದ ಪ್ರಕರಣಗಳಲ್ಲಿ ಯಾರಿಗೆ ಎಷ್ಟು ಪರಿಹಾರ ನೀಡಲಾಗಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಲು ಎರಡು ವಾರಗಳ ಸಮಯ ಬೇಕು‘ ಎಂದು ಕೋರಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆಯನ್ನು ಫೆಬ್ರುವರಿ 8ಕ್ಕೆ ಮುಂದೂಡಿದೆ.

ADVERTISEMENT

’ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ 2012ರ ಜನವರಿ 1ರಿಂದ 2019ರ ಮೇ 31ರವರೆಗೆ 60 ಅಸ್ವಾಭಾವಿಕ ಸಾವು ಪ್ರಕರಣಗಳಲ್ಲಿ ತಂದೆ-ತಾಯಿ, ಹೆಂಡತಿ, ಮಕ್ಕಳು, ಸಹೋದರರು ಅಥವಾ ಮೃತರ ಮೊದಲ ಅವಲಂಬಿತರಿಗೆ ₹ 1.61 ಕೋಟಿ ಪರಿಹಾರ ನೀಡಲಾಗಿದೆ‘ ಎಂದು ರಾಜ್ಯ ಸರ್ಕಾರ 2020ರ ಮಾರ್ಚ್‌ 13ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.