ADVERTISEMENT

ಶ್ರೀಶ್ರೀ ವಿರುದ್ಧ ಆತುರದ ಕ್ರಮ ಬೇಡ: ರಾಜ್ಯ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 0:30 IST
Last Updated 14 ಜನವರಿ 2026, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಕಗ್ಗಲೀಪುರ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು, ಕೆರೆ ಮತ್ತು ರಾಜಕಾಲುವೆ ಒತ್ತುವರಿ ಆರೋಪಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್‌ ಪ್ರತಿಷ್ಠಾನದ ಸಂಸ್ಥಾಪಕ ಶ್ರೀಶ್ರೀ ರವಿಶಂಕರ ಗುರೂಜಿ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಹೈಕೋರ್ಟ್‌, ರಾಜ್ಯ ಪ್ರಾಸಿಕ್ಯೂಷನ್‌ಗೆ ಆದೇಶಿಸಿದೆ.

‘ನನ್ನ ವಿರುದ್ಧ, ಬೆಂಗಳೂರು ಮೆಟ್ರೊಪಾಲಿಟನ್‌ ಟಾಸ್ಕ್‌ಫೋರ್ಸ್‌ (ಬಿಎಂಟಿಎಫ್‌) ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸಬೇಕು’ ಎಂದು ಕೋರಿ ಶ್ರೀಶ್ರೀ ರವಿಶಂಕರ ಗುರೂಜಿ (68) ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಸಕದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಟರ್‌ ಬಿ.ಎ.ಬೆಳ್ಳಿಯಪ್ಪ, ‘ಶ್ರೀಶ್ರೀ ವಿರುದ್ಧ ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 192 ಎ ಅಡಿಯಲ್ಲಿ ಬಿಎಂಟಿಎಫ್‌ ಎಫ್‌ಐಆರ್ ದಾಖಲಿಸಿದೆ. ಬಿಎಂಟಿಎಫ್‌ ಪೊಲೀಸ್‌ ಠಾಣೆಯ ಅಧಿಕಾರ ಹೊಂದಿದ್ದು, ನೋಟಿಸ್‌ ಕೊಡುವ ಅವಶ್ಯ ಇಲ್ಲ. ಬೇಕಾದರೆ ಅರ್ಜಿದಾರರು ತಾವು ಯಾವುದೇ ಒತ್ತುವರಿ ಮಾಡಿಲ್ಲ ಎಂಬುದನ್ನು ಹೇಳಿಬಿಡಲಿ’ ಎಂದು ಅರ್ಜಿದಾರರ ಪರ ವಕೀಲರಿಗೆ ಸವಾಲೆಸೆದರು.

ADVERTISEMENT

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಪಿ.ಪ್ರಸನ್ನ ಕುಮಾರ್‌, ‘ಪ್ರಾಸಿಕ್ಯೂಷನ್‌ ಮಂಡಿಸುತ್ತಿರುವ ವಾದ ಸರಣಿ ತೀರಾ ದುರುದೃಷ್ಟಕರವಾಗಿದೆ. ಇದು ಸಿವಿಲ್‌ ಕೇಸಲ್ಲ. ಮೊದಲು ಎಫ್‌ಐಆರ್‌ ದಾಖಲಿಸಿ ನಂತರ ಸಾಕ್ಷ್ಯ ಹುಡುಕುತ್ತಿರುವ ಪ್ರಾಸಿಕ್ಯೂಷನ್‌ ಕಳೆದ ಮೂರು ಮುದ್ದತುಗಳಲ್ಲಿ ತಾರೀಖುಗಳನ್ನು ಮಾತ್ರವೇ ಪಡೆಯುತ್ತಿದೆ. ನಮ್ಮ ಅರ್ಜಿದಾರರ ವಿರುದ್ಧ ಯಾವುದೇ ಸಾಕ್ಷ್ಯ ತಂದು ನ್ಯಾಯಾಲಯಕ್ಕೆ ಒಪ್ಪಿಸುತ್ತಿಲ್ಲ’ ಎಂದು ದೂರಿದರು.

‘ಈ ಮುನ್ನ ಮುಖ್ಯ ನ್ಯಾಯಮೂರ್ತಿಯವರ ಮುಂದಿದ್ದ ಸಾರ್ವಜನಿಕ ಹಿತಾಸಕ್ತಿ ಪ್ರಕರಣದಲ್ಲಿ ನಮ್ಮ ಅರ್ಜಿದಾರರು ಐದನೇ ಪ್ರತಿವಾದಿಯಾಗಿದ್ದರು. ವಿಲೇವಾರಿಯಾದ ಈ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಅವರು ಬೆಂಗಳೂರು ದಕ್ಷಿಣ ತಹಶೀಲ್ದಾರ್ ಅವರಿಂದ ವರದಿ ಪಡೆದಿದ್ದರು. ಆ ವರದಿಯಲ್ಲಿ ಎಲ್ಲೂ ಅರ್ಜಿದಾರರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪಗಳಿಲ್ಲ. ಅರ್ಜಿದಾರರ ಹೆಸರಿನಲ್ಲಿ ಸ್ಥಿರಾಸ್ತಿಯೂ ಇಲ್ಲ’ ಎಂದರು.

ವಾದ–ಪ್ರತಿವಾದ ಆಲಿಸಿದ ನ್ಯಾಯಪೀಠ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ಆದೇಶಿಸಿ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.