ADVERTISEMENT

ಸರ್ಕಾರಿ ವಕೀಲರಿಗೆ ₹44.59 ಲಕ್ಷ ಶುಲ್ಕವನ್ನು 4 ವಾರದೊಳಗೆ ಪಾವತಿಸಿ: ಹೈಕೋರ್ಟ್‌

ಸರ್ಕಾರಿ ವಕೀಲರ ಶುಲ್ಕ ಪಾವತಿಗೆ ಸೂತ್ರ ರೂಪಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 15:40 IST
Last Updated 5 ಸೆಪ್ಟೆಂಬರ್ 2025, 15:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಹಳೆ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದ ಹೈಕೋರ್ಟ್‌ನ ಹಿರಿಯ ವಕೀಲ ವಿಜಯಕುಮಾರ್ ಎಂ.ಶೀಲವಂತ ಅವರ ಶುಲ್ಕದ ಮೊತ್ತ ₹44.59 ಲಕ್ಷವನ್ನು ನಾಲ್ಕು ವಾರಗಳ ಒಳಗಾಗಿ ಪಾವತಿಸುವಂತೆ ಆದೇಶಿಸಿರುವ ಹೈಕೋರ್ಟ್, ಶುಲ್ಕ ಪಾವತಿಯಲ್ಲಿ ವಿಳಂಬ ಸಲ್ಲ ಎಂದೂ ಹೇಳಿದೆ.

‘ರಾಜ್ಯ ಸರ್ಕಾರ ನನಗೆ ಪಾವತಿಸಬೇಕಾದ ಶುಲ್ಕವನ್ನು ಇನ್ನೂ ಪಾವತಿಸಿಲ್ಲ’ ಎಂದು ಆಕ್ಷೇಪಿಸಿ ವಿಜಯಕುಮಾರ್ ಎಂ.ಶೀಲವಂತ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದ ರಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಪುರಸ್ಕರಿಸಿದೆ.

ಶುಲ್ಕದ ಮೊತ್ತ ₹44.59 ಲಕ್ಷವನ್ನು ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ನ್ಯಾಯಪೀಠ, ಈ ಕುರಿತ ಅನುಪಾಲನಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದೂ ತಾಕೀತು ಮಾಡಿದೆ.

ADVERTISEMENT

‘ಅಡ್ವೊಕೇಟ್‌ ಜನರಲ್‌, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು, ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳು, ಸರ್ಕಾರಿ ವಕೀಲರು ಅಥವಾ ಹೈಕೋರ್ಟ್‌ನ ಸರ್ಕಾರಿ ಪ್ಲೀಡರ್‌ಗಳು... ಇತ್ಯಾದಿ ಸರ್ಕಾರದ ಪರ ವಾದ ಮಂಡಿಸುವ ವಕೀಲರ ಶುಲ್ಕ ಪಾವತಿಯಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸಬಾರದು’ ಎಂದೂ ಆದೇಶಿಸಿದೆ.

ಮಾರ್ಗದರ್ಶಿ ಸೂತ್ರ: ‘ಸರ್ಕಾರದ ಪರ ವಾದ ಮಂಡಿಸುವ ವಕೀಲರಿಗೆ ಸಕಾಲದಲ್ಲಿ ಶುಲ್ಕ ಪಾವತಿ ಮಾಡುವ ನಿಟ್ಟಿನಲ್ಲಿ ಮತ್ತು ಶುಲ್ಕ ಪಾವತಿ ವ್ಯವಸ್ಥೆ ಪಾರದರ್ಶಕವಾಗಿರುವಂತೆ ಅಗತ್ಯ ಡಿಜಿಟಲ್‌ ವ್ಯವಸ್ಥೆಯೊಂದನ್ನು ರೂಪಿಸಿ’ ಎಂದು ರಾಜ್ಯ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿರುವ ನ್ಯಾಯಪೀಠ ಈ ದಿಸೆಯಲ್ಲಿ ಮಾರ್ಗದರ್ಶಿ ಸೂತ್ರಾಂಶಗಳನ್ನೂ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.