
ಬೆಂಗಳೂರು: ಪ್ರೊಬೆಷನರಿ ಅವಧಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಂಗವಿಕಲ ಉದ್ಯೋಗಿಯೊಬ್ಬರನ್ನು ಸೇವೆಯಿಂದ ವಜಾಗೊಳಿಸಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್, ‘ಉದ್ಯೋಗಿಯನ್ನು ಸೇವೆಗೆ ಮರು ನಿಯೋಜನೆ ಮಾಡಬೇಕು’ ಎಂದು ನಿರ್ದೇಶಿಸಿದೆ.
ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ನಗರದ ಸೇಂಟ್ ಮಾರ್ಕ್ಸ್ ರಸ್ತೆ ಶಾಖೆಯ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಲ್ಲಿಸಿದ್ದ ಮೇಲ್ಮನವಿಯನ್ನು (ಡಬ್ಲ್ಯು.ಎ 1880/2025) ನ್ಯಾಯಮೂರ್ತಿ ಡಿ.ಕೆ.ಸಿಂಗ್ ನೇತೃತ್ವದ ವಿಭಾಗೀಯ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿದೆ.
ಪ್ರಕರಣವೇನು?:
ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಕುರುವ ಸೋಮೇಶ್ (29) ಭಾರತೀಯ ಸ್ಟೇಟ್ ಬ್ಯಾಂಕ್‌ನ ಸೇಂಟ್ ಮಾರ್ಕ್ಸ್ ರಸ್ತೆ ಶಾಖೆಯಲ್ಲಿ 2023ರಲ್ಲಿ ಕಿರಿಯ ಸಹಾಯಕರಾಗಿ ನೇಮಕಗೊಂಡಿದ್ದರು. ಒಂಬತ್ತು ತಿಂಗಳ ಉದ್ಯೋಗ ನಿರ್ವಹಿಸಿದ್ದ ಅವರನ್ನು ಕರ್ತವ್ಯ ಲೋಪ ಆರೋಪದಡಿ ವಜಾಗೊಳಿಸಲಾಗಿತ್ತು.
ವಜಾ ಆದೇಶವನ್ನು ಪ್ರಶ್ನಿಸಿ ಸೋಮೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರನ್ನು ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು’ ಎಂದು 2025ರ ಅಕ್ಟೋಬರ್ 16ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಬ್ಯಾಂಕ್ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು.
ಅಂಗವಿಕಲ ಅರ್ಜಿದಾರರ ಪರ ಹೈಕೋರ್ಟ್ ವಕೀಲ ಎಚ್.ಸುನಿಲ್ ಕುಮಾರ್ ಮಂಡಿಸಿದ ವಾದವನ್ನು ಮನ್ನಿಸಿರುವ ವಿಭಾಗೀಯ ನ್ಯಾಯಪೀಠ, ‘ಬ್ಯಾಂಕ್ ಈ ಪ್ರಕರಣದಲ್ಲಿ ತನ್ನ ವಿವೇಚನೆಯನ್ನು ಬಳಸಿಲ್ಲ. ಏಕಪಕ್ಷೀಯವಾಗಿ ನಡೆದುಕೊಂಡಿದೆ. ಅರ್ಜಿದಾರರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳೂ ಇಲ್ಲ. ಹಾಗಾಗಿ, ವಜಾ ಆದೇಶ ಕಳಂಕಿತವಾಗಿದ್ದು ಇದನ್ನು ರದ್ದುಪಡಿಸಲಾಗುತ್ತಿದೆ’ ಎಂದು ಆದೇಶದಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.