ADVERTISEMENT

ಜಮೀನು ಅಕ್ರಮ: ಶಾಸಕ ನಂಜೇಗೌಡ ವಿರುದ್ಧ ಎಫ್‌ಐಆರ್‌ಗೆ ಆದೇಶ

₹150 ಕೋಟಿ ಮೌಲ್ಯದ ಸರ್ಕಾರಿ ಜಮೀನು ಅಕ್ರಮ ಮಂಜೂರು

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2022, 21:37 IST
Last Updated 20 ಅಕ್ಟೋಬರ್ 2022, 21:37 IST
‌ನಂಜೇಗೌಡ
‌ನಂಜೇಗೌಡ   

ಬೆಂಗಳೂರು:ಮಾಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಂದಾಯ ಇಲಾಖೆಗೆ ಸೇರಿದ ಅಂದಾಜು ₹ 150 ಕೋಟಿಗೂ ಹೆಚ್ಚಿನ ಮಾರುಕಟ್ಟೆ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರಿನ ಕಾಂಗ್ರೆಸ್‌ ಶಾಸಕ ಕೆ.ವೈ. ನಂಜೇಗೌಡ ವಿರುದ್ಧ ಎಫ್‌ಐಆರ್‌ ದಾಖಲಿಸಲು ಬೆಂಗಳೂರು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶೆ ಜೆ.ಪ್ರೀತ್‌, ‘ಅಪರಾಧ ದಂಡ ಸಂಹಿತೆ (ಸಿಆರ್‌ಪಿಸಿ) ಕಲಂ 156ರ (3) ಅನ್ವಯ ಈ ಪ್ರಕರಣ ತನಿಖೆಗೆ ಲಾಯಕ್ಕಾಗಿದೆ. ಆದ್ದರಿಂದ, ತನಿಖೆ ಕೈಗೊಂಡು ಡಿಸೆಂಬರ್ 7ಕ್ಕೆ ವರದಿ ಸಲ್ಲಿಸಿ’ ಎಂದು ಮಾಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದಾರೆ.

‘ಮಾಲೂರು ಕ್ಷೇತ್ರ ವ್ಯಾಪ್ತಿಯ 80 ಎಕರೆಗೂ ಹೆಚ್ಚು ಜಮೀನಿಗೆ ಖೋಟಾ ದಾಖಲೆಗಳನ್ನು ತಯಾರಿಸಿ ಅನರ್ಹರು,
ಕಾಲ್ಪನಿಕ (ಮೃತರು) 38 ವ್ಯಕ್ತಿಗಳಿಗೆ ನಿವೇಶನ ಹಂಚಿಕೆ ಮಾಡಲಾಗಿದೆ.ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಅನುಸಾರ ಸ್ಥಾಪಿತವಾದ ಭೂ ಮಂಜೂರಾತಿ ಸಮಿತಿಗೆ ಶಾಸಕ ಕೆ.ವೈ.ನಂಜೇಗೌಡ ಮಂಜೂರಾತಿಗೆ ಅನುಮೋದನೆ ನೀಡಿದ್ದಾರೆ' ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ADVERTISEMENT

‘ಹಂಚಿಕೆ ಕಾನೂನು ಬಾಹಿರವಾಗಿದೆ’ ಎಂಬ ಆರೋಪದ ಹಿನ್ನೆಲೆಯಲ್ಲಿ ಅಂದಿನ ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಮಂಜೂರಾತಿ ರದ್ದುಗೊಳಿಸಿದ್ದರು.

ಕೋಲಾರ ತಹಶೀಲ್ದಾರ್‌ ವಿರುದ್ಧವೂ ಕ್ರಮ?

‘ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ವಾಸ್ತವ ಸಂಗತಿಗಳನ್ನು ಮರೆಮಾಚುವ ಮೂಲಕ
ಅಂದಿನ ಮಾಲೂರು ತಹಶೀಲ್ದಾರ್ ನಾಗರಾಜ್‌ (ಪ್ರಸ್ತುತ ಕೋಲಾರ ತಹಶೀಲ್ದಾರ್), ಸದಸ್ಯರಾದ ಡಿ.ಎಂ.ನಾಗರಾಜ್‌, ಎಸ್.ನಾಗಪ್ಪ ಮತ್ತು ಎನ್‌.ಲಕ್ಷ್ಮಮ್ಮ ಅವರನ್ನೂ ಆರೋಪಿಗಳನ್ನಾಗಿ ಮಾಡಬೇಕು’ ಎಂಬ ಫಿರ್ಯಾದುದಾರ ಕೋರಿಕೆಯನ್ನು ನ್ಯಾಯಾಧೀಶರು ಮಾನ್ಯ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.