ADVERTISEMENT

ಪೋಷಕರ ದೌರ್ಜನ್ಯ: ಮನೆ ತೊರೆದ ಯುವತಿಗೆ ಹೈಕೋರ್ಟ್‌ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 15:40 IST
Last Updated 13 ಜನವರಿ 2026, 15:40 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ಪೋಷಕರ ದೌರ್ಜನ್ಯ ತಾಳಲಾರದೆ ಸ್ವಇಚ್ಛೆಯಿಂದ ಮನೆ ತೊರೆದು ಬಂದು ಸ್ನೇಹಿತನ ಜೊತೆ ಪ್ರತ್ಯೇಕವಾಗಿ ವಾಸಿಸುತ್ತಿರುವ ಎಂಜಿನಿಯರಿಂಗ್‌ ಪದವೀಧರೆಯೊಬ್ಬಳ ರಕ್ಷಣೆಗೆ ಹೈಕೋರ್ಟ್ ಮುಂದಾಗಿದೆ.

‘ಸುಳ್ಳು ಆರೋಪಗಳ ಅಡಿಯಲ್ಲಿ ನನ್ನ ವಿರುದ್ಧ ವರ್ತೂರು ಮತ್ತು ರಾಜಗೋಪಾಲ ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಬೇಕು’ ಎಂದು ಕೋರಿ ಯುವತಿಗೆ ಆಶ್ರಯ ನೀಡಿರುವ ಅರ್ಜಿದಾರರು ಸಲ್ಲಿಸಿರುವ ಎರಡು ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಆಲಿಸಿದ ನ್ಯಾಯಪೀಠ, ‘ಯುವತಿಯನ್ನು ಅಪಹರಿಸಲಾಗಿದೆ ಎಂಬ ಪೋಷಕರ ದೂರು ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಅಶ್ಲೀಲ ಸಂದೇಶ ರವಾನಿಸಿದ್ದಾರೆ ಎಂದು ಆರೋಪಿಸಿ ಮೂರನೇ ವ್ಯಕ್ತಿ ಅರ್ಜಿದಾರರ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಆತುರದ ಕ್ರಮ ಕೈಗೊಳ್ಳಬಾರದು’ ಎಂದು ಪ್ರಾಸಿಕ್ಯೂಷನ್‌ಗೆ ಆದೇಶಿಸಿತು. ವಿಚಾರಣೆಯನ್ನು ಇದೇ 19ಕ್ಕೆ ಮುಂದೂಡಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್‌ ಹಿರಿಯ ವಕೀಲ ಸಿ.ಎಚ್‌.ಹನುಮಂತರಾಯ ವಕಾಲತ್ತು ವಹಿಸಿದ್ದಾರೆ.

ADVERTISEMENT

ಅರ್ಜಿಯಲ್ಲಿ ಏನಿದೆ?:

ಪೋಷಕರ ದೌರ್ಜನ್ಯ ತಾಳಲಾರದೆ ಮನೆಬಿಟ್ಟು ಬಂದ 24 ವರ್ಷದ ಯುವತಿಗೆ ಆಶ್ರಯ ನೀಡಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಯುವತಿ ಮ್ಯಾಜಿಸ್ಟ್ರೇಟರ ಮುಂದೆ ಈಗಾಗಲೇ ಈ ಕುರಿತು ಸ್ವಇಚ್ಛಾ ಹೇಳಿಕೆಯನ್ನೂ ದಾಖಲಿಸಿದ್ದಾರೆ. ಆದರೂ ಪೋಷಕರು ಕೆಲವು ಮಹಿಳಾ ಸಂಘಗಳ ಸಹಾಯದಿಂದ ನಮ್ಮ ಮನೆಗೆ ನುಗ್ಗಿ ಯುವತಿ ಮತ್ತು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅಶ್ಲೀಲ ಸಂದೇಶ ರವಾನಿಸಿದ ಆರೋಪದಡಿ ಮೂರನೇ ವ್ಯಕ್ತಿಯೊಬ್ಬರಿಂದ ನನ್ನ ವಿರುದ್ಧ ದೂರು ದಾಖಲಿಸಿದ್ದು ಈ ಕ್ರಿಮಿನಲ್‌ ಪ್ರಕರಣಗಳನ್ನು ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.