ಬೆಂಗಳೂರು: ಹಸುವನ್ನು ಕೊಲ್ಲುವ ವಿಡಿಯೊ ಒಳಗೊಂಡ ಸುಳ್ಳು ಸುದ್ದಿಯನ್ನು ವಾಟ್ಸ್ ಆ್ಯಪ್‌ನಲ್ಲಿ ಹರಿಬಿಡುವ ಮೂಲಕ ದೊಂಬಿಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿದ್ದ ಕೊಡಗು ಜಿಲ್ಲೆಯ ಬೇರುಗ ಗ್ರಾಮದ ವಿವೇಕ್ ಕಾರ್ಯಪ್ಪ ಎಂಬುವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣ ರದ್ದುಪಡಿಸುವಂತೆ ಕೋರಿ ವಿವೇಕ್ ಕಾರ್ಯಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
‘ಅರ್ಜಿದಾರರು ಆಕ್ಷೇಪಾರ್ಹ ವಿಡಿಯೋವನ್ನು ‘ಕೊಡಗು ಇಶ್ಯೂಸ್ ಅಂಡ್ ಸಜೆಷನ್ಸ್ʼ ಹೆಸರಿನ ವಾಟ್ಸ್ ಆ್ಯಪ್ ಗ್ರೂಪ್‌ಗೆ ಹಾಕಿ ಕ್ಷಣಮಾತ್ರದಲ್ಲೇ ಡಿಲೀಟ್ ಮಾಡಿದ್ದಾರೆ. ನಂತರ ಗ್ರೂಪ್‌ನಿಂದ ನಿರ್ಗಮಿಸಿದ್ದಾರೆ. ಹಾಗಾಗಿ, ಕಾರ್ಯಪ್ಪ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 153 ಅನ್ನು ಅನ್ವಯಿಸುವ ಅಂಶಗಳು ಇಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಪೀಠ ಪ್ರಕರಣ ರದ್ದುಪಡಿಸಿದೆ.
‘ಘಟನೆ ಕೇರಳದಲ್ಲಿ ನಡೆದಿದೆ ಎಂದು ಬಿಂಬಿಸುವ ಮೂಲಕ ವಿವೇಕ್ ಕಾರ್ಯಪ್ಪ ಅನ್ಯಧರ್ಮಗಳ ವಿರುದ್ಧ ಉದ್ದೇಶಪೂರ್ವಕ ಸುಳ್ಳು ಸುದ್ದಿ ಹರಿಬಿಟ್ಟಿದ್ದಾರೆ’ ಎಂದು ಆರೋಪಿಸಿ ಶ್ರೀಮಂಗಲ ಠಾಣೆಯ ಕಾನ್‌ಸ್ಟೆಬಲ್ ಶರತ್ ಕುಮಾರ್ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ವಿವೇಕ್ ಕಾರ್ಯಪ್ಪ ವಿರುದ್ಧ ಐಪಿಸಿ ಕಲಂ 505(2) ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ರದ್ದುಪಡಿಸುವಂತೆ ಕೋರಿ ವಿವೇಕ್ ಕಾರ್ಯಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.