
ಬೆಂಗಳೂರು: ‘ಕರ್ತವ್ಯ ಲೋಪದ ಆರೋಪದಡಿ ಚಿಕ್ಕಮಗಳೂರು ಜಿಲ್ಲೆ ಬಾಲ ಕಾರ್ಮಿಕ (ನಿರ್ಮೂಲನಾ) ಯೋಜನಾ ಸೊಸೈಟಿಯ ನಿರ್ದೇಶಕ ಹುದ್ದೆಯಿಂದ ವಜಾಗೊಂಡಿರುವ ಬಿ.ಎಂ.ಪ್ರವೀಣ್ ಕುಮಾರ್ ಅವರನ್ನು ಅದೇ ಹುದ್ದೆಗೆ ಮರು ನಿಯೋಜಿಸಬೇಕು’ ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವಜಾ ಆದೇಶ ಪ್ರಶ್ನಿಸಿ ಬಿ.ಎಂ.ಪ್ರವೀಣ್ ಕುಮಾರ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಅರ್ಜಿದಾರರನ್ನು ಯೋಜನಾ ನಿರ್ದೇಶಕ ಹುದ್ದೆಗೆ ಮರು ನಿಯೋಜಿಸಬೇಕು’ ಎಂದು ಆದೇಶಿಸಿದೆ.
ಅರ್ಜಿದಾರರ ಪರ ಹೈಕೋರ್ಟ್ ವಕೀಲ ಕೆ.ಗೋವಿಂದರಾಜ್ ಮಂಡಿಸಿದ್ದ ವಾದವನ್ನು ಪುರಸ್ಕರಿಸಿರುವ ನ್ಯಾಯಪೀಠ, ‘ಗಂಭೀರ ಆರೋಪಗಳಿದ್ದಾಗ ಅರ್ಜಿದಾರರಿಗೆ ಸೂಕ್ತ ಅವಕಾಶ ನೀಡಿ; ಅವರ ವಿವರಣೆ ಆಲಿಸದೆ ಸೇವೆಯಿಂದ ವಜಾಗೊಳಿಸುವುದು ಸಂವಿಧಾನದ 14 ನೇ ವಿಧಿಯಡಿ ಖಾತರಿಪಡಿಸಲಾದ ಸಮಾನತೆಯ ಹಕ್ಕಿನ ಉಲ್ಲಂಘನೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಕಾರ್ಮಿಕ ಅಧಿಕಾರಿಯ ಆದೇಶವನ್ನು ರದ್ದುಪಡಿಸಿದೆ.
ಅರ್ಜಿದಾರರು 2011ರ ಅಕ್ಟೋಬರ್ 18ರಂದು ಗುತ್ತಿಗೆ ಆಧಾರದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಲ ಕಾರ್ಮಿಕ (ನಿರ್ಮೂಲನಾ) ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರ ಹುದ್ದೆಗೆ ನೇಮಕಗೊಂಡಿದ್ದರು. ಕರ್ತವ್ಯ ಲೋಪ ಆರೋಪದಡಿ ಅವರನ್ನು 2025ರ ಡಿಸೆಂಬರ್ 15ರಂದು ವಜಾಗೊಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.