
ಬೆಂಗಳೂರು: ಪ್ರತಿ ತಿಂಗಳ ಎರಡು ಶನಿವಾರಗಳಂದು ಹೈಕೋರ್ಟ್‌ನ ಪೂರ್ಣ ಕಲಾಪ ನಡೆಸುವ ಮತ್ತು 2026ರ ಜನವರಿಯಿಂದಲೇ ಆರಂಭಿಸಲು ಉದ್ದೇಶಿಸಿರುವ ಪ್ರಸ್ತಾವವನ್ನು ಬೆಂಗಳೂರು ವಕೀಲರ ಸಂಘ (ಎಎಬಿ) ಸ್ಪಷ್ಟವಾಗಿ ತಿರಸ್ಕರಿಸಿದೆ.
‘ಈ ಕುರಿತು ಇದೇ 16ರಂದು ನಡೆಸಲಾದ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಗಿದೆ ಮತ್ತು ಈ ನಿರ್ಧಾರವನ್ನು ಅನುಷ್ಠಾನಗೊಳಿಸಲು ಮುಂದಾದರೆ ಯಾವುದೇ ವಕೀಲರು ಕಲಾಪಗಳಿಗೆ ಹಾಜರಾಗುವುದಿಲ್ಲ’ ಎಂದು ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಎಡಬಿಡದೆ ದುಡಿಯುವುದರಿಂದ ವಕೀಲರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಈ ನಿಟ್ಟಿನಲ್ಲಿ ಸಂಘದ ಅವಲೋಕಿತ ಅಂಶಗಳನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಪರಿಗಣಿಸದೇ ಇರುವುದು ದುರದೃಷ್ಟಕರ. ಅವರ ಈ ನಿರ್ಧಾರ ವಕೀಲರ ಜೊತೆಗಿನ ಅನಗತ್ಯ ಮುಖಾಬಿಲೆಗೆ ಕಾರಣವಾಗಲಿದೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
‘ಒಂದು ವೇಳೆ ಯಾವುದೇ ಸಕಾರಾತ್ಮಕ ನಿರ್ಧಾರ ಕಂಡು ಬಾರದೇ ಹೋದರೆ ಶನಿವಾರ ಕಲಾಪ ನಡೆಸುವ ತೀರ್ಮಾನ ಪ್ರಕಟವಾಗುವ ವಾರದಲ್ಲೇ ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ಕರೆಯಲಾಗುವುದು ಮತ್ತು ಧರಣಿ ಹೊರತುಪಡಿಸಿದಂತೆ ಮುಂದಿನ ಹೋರಾಟದ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದು’ ಎಂದು ತಿಳಿಸಲಾಗಿದೆ.
ನೇಮಕಾತಿ ಶಿಫಾರಸಿಗೆ ವಿಳಂಬ
‘ಮುಂದಿನ ಎರಡು ತಿಂಗಳ ಒಳಗಾಗಿ ಕರ್ನಾಟಕ ಹೈಕೋರ್ಟ್‌ಗೆ ವಕೀಲ ವೃಂದದ ವತಿಯಿಂದ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದಕ್ಕೆ ಕರ್ನಾಟಕ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡುವ ಬಗ್ಗೆ ಮುಂದಡಿ ಇಡದೇ ಹೋದಲ್ಲಿ ವಕೀಲರ ಸಂಘ ಧರಣಿ ಹಮ್ಮಿಕೊಳ್ಳಲಿದೆ’ ಎಂದು ಸಂಘವು ಇದೇ ವೇಳೆ ಎಚ್ಚರಿಸಿದೆ.
‘ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ವಿಳಂಬ ತೋರುತ್ತಿರುವುದು ಒಂದು ತಲೆಮಾರಿನ ಪ್ರಾತಿನಿಧ್ಯಕ್ಕೆ ಸಂಚಕಾರ ತಂದಂತಾಗಿದೆ’ ಎಂದು ನಿರ್ಣಯದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.
‘ನ್ಯಾಯಮೂರ್ತಿಗಳ ನೇಮಕ ವಿಷಯಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳ ವಕೀಲರ ಸಂಘದ ಪ್ರತಿನಿಧಿಗಳು ಶೀಘ್ರವೇ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಶೀಘ್ರವೇ ಭೇಟಿ ಮಾಡಿ ಚರ್ಚಿಸಲಿದೆ’ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.