ADVERTISEMENT

ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 16:52 IST
Last Updated 18 ಜನವರಿ 2022, 16:52 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ’ಹಾವೇರಿ ಜಿಲ್ಲೆಯನೆಲವಾಗಿಲುಗ್ರಾಮವನ್ನು ಅದೇ ಜಿಲ್ಲೆಯ ಕೊಡಿಯಾಲ ಗ್ರಾಮಕ್ಕೆ ಸ್ಥಳಾಂತರಿಸುವ ಸಂಬಂಧ ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಿ‘ ಎಂದು ಕಳೆದ ವಿಚಾರಣೆ ವೇಳೆ ನೀಡಿದ್ದ ಆದೇಶ ಪಾಲಿಸದಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತು ರೇಣುಕಾ ಹಾಗೂ ಜೀವಪ್ಪ ಮಲ್ಲಪ್ಪ ಭೀಮಾಪುರ ಸೇರಿದಂತೆ ಒಟ್ಟು 34 ಜನ ಸಲ್ಲಿಸಿರುವ ಎರಡು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ನ್ಯಾಯಪೀಠವು ಈ ಹಿಂದಿನ ವಿಚಾರಣೆ ವೇಳೆ, ’ವಸ್ತುಸ್ಥಿತಿ ವರದಿ ಸಲ್ಲಿಸಲು ತಪ್ಪಿದಲ್ಲಿ ವಿಚಾರಣೆಗೆ ಖುದ್ದು ಹಾಜರಾಗಬೇಕು‘ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿತ್ತು. ಇದರಂತೆ ಮಂಗಳವಾರಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ತಮ್ಮ ಕಚೇರಿಯಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಉತ್ತರಿಸಿದರು. ’ವರದಿ ತಯಾರಾಗಿದೆ ಆದರೆ, ಕೋವಿಡ್ ಕಾರಣದಿಂದ ಅಂತಿಮಗೊಳಿಸಿ ಸಲ್ಲಿಸಲು ಸಾಧ್ಯವಾಗಿಲ್ಲ‘ ಎಂದು ತಿಳಿಸಿದರು.

ADVERTISEMENT

ಇದಕ್ಕೆ ಕೆರಳಿದ ನ್ಯಾಯಪೀಠ, ’ನೀವು ನಿಮ್ಮ ಕಚೇರಿಯಿಂದಲೇ ವಿಚಾರಣೆಗೆ ಹಾಜರಾಗಿದ್ದೀರಿ. ಈ ರೀತಿ ಕಚೇರಿಯಲ್ಲೇ ಕುಳಿತು ವಿಚಾರಣೆಗೆ ಹಾಜರಾಗಲು ನಿಮಗೆ ಅವಕಾಶ ಕೊಟ್ಟಿದ್ದು ಯಾರು, ಕೋರ್ಟ್ ಈ ಹಿಂದಿನ ವಿಚಾರಣೆಯ ವೇಳೆ ನೀಡಿದ್ದ ಆದೇಶವನ್ನು ಯಾಕೆ ಪಾಲಿಸಿಲ್ಲ, ಕೋರ್ಟ್‌ ಆದೇಶ ಎಂದರೆ ನಿಮಗೆ ಅಷ್ಟೊಂದು ಸದರವೇ, ನಿಮ್ಮಂತಹ ಅಧಿಕಾರಿಗಳು ಕೋರ್ಟ್ ಪ್ರಕ್ರಿಯೆಯಲ್ಲಿ ಭಾಗವಹಿಸುವಾಗ ಧರಿಸಬೇಕಾದ ಡ್ರೆಸ್‌ ಕೋಡ್‌ ಅನ್ನು ಕೂಡಾ ನೀವು ಮರೆತಂತಿದೆ. ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಆದೇಶಿಸಬೇಕಾಗುತ್ತದೆ‘ ಎಂದು ಎಚ್ಚರಿಸಿತು.

ಇದಕ್ಕೆ ಸಮಜಾಯಿಷಿ ನೀಡಲು ಮುಂದಾದ ಸರ್ಕಾರದ ಪರ ವಕೀಲ ಎಸ್‌.ರಾಜಶೇಖರ್‌, ’ನಿನ್ನೆ ಸಂಜೆಯಷ್ಟೇ ವರದಿ ಸಲ್ಲಿಸಿದ್ದಾರೆ. ನಾನು ಕ್ವಾರೆಂಟೈನ್‌ನಲ್ಲಿ ಇರುವ ಕಾರಣ ನ್ಯಾಯಪೀಠಕ್ಕೆ ಸಲ್ಲಿಸಲು ಆಗಿಲ್ಲ‘ ಎಂದರು.

ಈ ಮಾತಿಗೆ ಕೆಂಡಾಮಂಡಲವಾದನ್ಯಾಯಪೀಠ, ’ನೀವು ಕ್ವಾರೆಂಟೈನ್‌ನಲ್ಲಿ ಇರುವುದಾದರೆ ನಿಮ್ಮ ಕೆಲಸವನ್ನು ಬೇರೆಯವರಿಗೆ ವಹಿಸಬಹುದಿತ್ತಲ್ಲವೇ, ನಿಮ್ಮಿಂದಾಗಿ ಅಧಿಕಾರಿಯೂ ಮುಜುಗುರ ಅನುಭವಿಸಬೇಕಾಗಿ ಬಂತಲ್ಲ,ನ್ಯಾಯಪೀಠಕ್ಕೆ ನೀವು ನೀಡುತ್ತಿರುವ ಸಮಜಾಯಿಷಿ ಸರಿಯಿಲ್ಲ‘ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿತು.

’ನೀವು ಈ ರೀತಿ ಮಾಡುತ್ತಿರುವುದು ಇದೇ ಮೊದಲ ಬಾರಿಯೂ ಅಲ್ಲ. ನಿಮಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿದೆ. ಆದರೆ, ನೀವು ನಿಮ್ಮ ವರ್ತನೆಯನ್ನು ಬದಲಾಯಿಸಿಕೊಂಡಿಲ್ಲ. ನಿಮ್ಮನ್ನು ಸರ್ಕಾರಿ ವಕೀಲರ ತಂಡದಿಂದಲೇ ವಜಾಗೊಳಿಸಲು ನಿರ್ದೇಶಿಸಬೇಕಾಗುತ್ತದೆ‘ ಎಂದು ರಾಜಶೇಖರ್‌ ಅವರಿಗೆ ಖಡಕ್‌ ಎಚ್ಚರಿಕೆ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 24ಕ್ಕೆ ಮುಂದೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.