ಬೆಂಗಳೂರು: ಸಹಕಾರ ಸಂಘಗಳನ್ನು ಸ್ಥಾಪಿಸಿ ಆ ಮೂಲಕ ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ನೌಕರರನ್ನು ನಿಯೋಜಿಸುವ ಪ್ರಕ್ರಿಯೆನಲ್ಲಿ ಟೆಂಡರ್‌ಗೆ ವಿನಾಯಿತಿ ನೀಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಟೆಂಡರ್ ವಿನಾಯಿತಿ ನೀಡಿಕೆ ಸಂಬಂಧ ರಾಜ್ಯ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಶಿವಮೊಗ್ಗದ, ‘ದಿ ಪ್ರೈವೇಟ್ ಎಂಪ್ಲಾಯ್ಮೆಂಟ್ ಬ್ಯೂರೊ’ ಪಾಲುದಾರ ಸುರೇಶ್ ಕೆ.ಬಾಳೆಗುಂಡಿ ಸೇರಿದಂತೆ ಮೂವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣೆ ನಡೆಸಿ ಈ ಕುರಿತು ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಜಯಕುಮಾರ್ ಎಸ್.ಪಾಟೀಲ ಅವರ ವಾದ ಅಲಿಸಿದ ನ್ಯಾಯಪೀಠ, ‘ಒಂದು ವೇಳೆ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಯಾವುದಾದರೂ ಸೊಸೈಟಿ ಸ್ಥಾಪನೆಗೊಂಡಿದ್ದರೆ ಅಂತಹ ಸೊಸೈಟಿಗಳು ಮುಂದಿನ ವಿಚಾರಣೆವರೆಗೂ ತಮ್ಮ ಕಾರ್ಯಚಟುವಟಿಕೆ ಆರಂಭಿಸಲು ಮುಂದಾಗಬಾರದು’ ಎಂದು ತನ್ನ ಮಧ್ಯಂತರ ಆದೇಶದಲ್ಲಿ ವಿವರಿಸಿದೆ.
ಏನಿದು ಅರ್ಜಿ?
ಸರ್ಕಾರದ ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ನೌಕರರನ್ನು ನಿಯೋಜಿಸುವ ನಿಟ್ಟಿನಲ್ಲಿ ಖಾಸಗಿ ಏಜೆನ್ಸಿಗಳಿಂದ ಹೊರಗುತ್ತಿಗೆ ಪಡೆಯುವ ಬದಲಿಗೆ ಸಹಕಾರ ಸಂಘಗಳ ಮೂಲಕವೇ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸೊಸೈಟಿ ರಚಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ಈ ಆದೇಶದದ ಅನ್ವಯ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಕಾಯ್ದೆ-1999ರ (ಕೆಟಿಪಿಪಿ ಕಾಯ್ದೆ) ಕಲಂ 4(ಜಿ) ಗೆ ವಿನಾಯಿತಿ ನೀಡಲಾಗಿದೆ. ಈ ಸಂಬಂಧ 2024ರ ಅಕ್ಟೋಬರ್ 1ರಂದು ಹೊರಡಿಸಿರುವ ಆದೇಶವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ಅರ್ಜಿದಾರರ ಪರ ಹೈಕೋರ್ಟ್ ವಕೀಲರಾದ ಎ.ಮೊಹಮದ್ ತಾಹಿರ್ ಹಾಗೂ ವರುಣ್ ಜೆ.ಪಾಟೀಲ ವಕಾಲತ್ತು ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.