ADVERTISEMENT

ಸಚಿವ ಎಚ್‌ಡಿಕೆ ವಿರುದ್ಧದ ಜಮೀನು ಒತ್ತುವರಿ ಆರೋಪ: ತೆರವು ನೋಟಿಸ್‌ಗೆ ತಡೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2025, 0:30 IST
Last Updated 25 ಮಾರ್ಚ್ 2025, 0:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಕೇತಗಾನಹಳ್ಳಿ ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ರಾಮನಗರ ತಹಶೀಲ್ದಾರ್‌ ಅವರು, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ನೀಡಿರುವ ನೋಟಿಸ್‌ ಅನುಸಾರ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು’ ಎಂದು ಹೈಕೋರ್ಟ್‌, ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

ಈ ಸಂಬಂಧ ಎಚ್‌.ಡಿ.ಕುಮಾರ ಸ್ವಾಮಿ ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎನ್‌.ಎಸ್‌.ಸಂಜಯಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ವಿಚಾರಣೆ ವೇಳೆ ಕುಮಾರಸ್ವಾಮಿ ಪರ ಪದಾಂಕಿತ ಹಿರಿಯ ವಕೀಲ ಉದಯ ಹೊಳ್ಳ ಮಂಡಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ‘ಮುಂದಿನ ಆದೇಶದವರೆಗೆ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಪ್ರತಿವಾದಿಗಳಾದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಮನಗರ ತಾಲ್ಲೂಕು ತಹಶೀಲ್ದಾರ್‌ ಅವರಿಗೆ ಆದೇಶಿಸಿತು. ಕುಮಾರಸ್ವಾಮಿ ಪರ ಹೈಕೋರ್ಟ್‌ ವಕೀಲ ಎ.ವಿ.ನಿಶಾಂತ್‌ ವಕಾಲತ್ತು ವಹಿಸಿದ್ದಾರೆ.

ADVERTISEMENT

ನೋಟಿಸ್‌ ಏನು?: ‘ಕೇತಗಾನಹಳ್ಳಿ ಸರ್ವೇ ನಂಬರ್‌ 7 ಮತ್ತು 8ರಲ್ಲಿ ಪೋಡಿ ದುರಸ್ತಿಯಾಗದ ಜಮೀನಿನಲ್ಲಿ ನೀವು ಅನಧಿಕೃತವಾಗಿ ಒತ್ತುವರಿ ಮಾಡಿ ಸ್ವಾಧೀನಾನುಭವ ಹೊಂದಿದ್ದೀರಿ. ಹಾಗಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಕಲಂ 94ರ ಅಡಿಯಲ್ಲಿ ಏಕೆ ನಿಮ್ಮಿಂದ ದಂಡ ವಸೂಲಿ ಮಾಡಬಾರದು ಎಂಬುದಕ್ಕೆ ಸಮಜಾಯಿಷಿ ನೀಡಿ. ಈ ಕುರಿತಂತೆ ನಿಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಿ. ಇಲ್ಲವಾದಲ್ಲಿ ಕಾನೂನು ರೀತ್ಯಾ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ರಾಮನಗರ ತಾಲ್ಲೂಕು ತಹಶೀಲ್ದಾರ್‌ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದೇ 18ರಂದು ಒತ್ತುವರಿ ತೆರವು ನೋಟಿಸ್‌ ನೀಡಿದ್ದರು.

ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ: ನೋಟಿಸ್‌

ಬೆಂಗಳೂರು: ಮನೆಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸರಿಸುಮಾರು ಒಂದು ವರ್ಷದಿಂದ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ, ಜಾಮೀನು ಕೋರಿ ಎರಡನೇ ಬಾರಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಸಂಬಂಧ ಪ್ರಜ್ವಲ್‌ ರೇವಣ್ಣ ಸಲ್ಲಿಸಿರುವ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು ಅವರು ಸೋಮವಾರ ವಿಚಾರಣೆ ನಡೆಸಿದರು.

ವಿಚಾರಣೆ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು. ಅಂತೆಯೇ, ಪ್ರಕರಣದಲ್ಲಿ ದೂರುದಾರ ಮಹಿಳೆಯನ್ನು ಪ್ರತಿವಾದಿಯನ್ನಾಗಿ ಮಾಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿ ವಿಚಾರಣೆಯನ್ನು ಏಪ್ರಿಲ್‌ 7ಕ್ಕೆ ಮುಂದೂಡಿತು.

ಪ್ರಜ್ವಲ್‌ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಅತ್ಯಾಚಾರ ಪ್ರಕರಣ ದಾಖಲಾಗಿವೆ. ಇವುಗಳಲ್ಲಿ ಪ್ರಜ್ವಲ್‌ ಮೊದಲನೇ ಪ್ರಕರಣದಲ್ಲಿ ಜಾಮೀನು ಕೋರಿರುವ ಅರ್ಜಿ ಇದಾಗಿದೆ.
ಎರಡು ಬಾರಿ ವಿಚಾರಣಾ ನ್ಯಾಯಾಲಯ, ತಲಾ ಒಂದೊಂದು ಬಾರಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಜಾಮೀನು ನಿರಾಕರಿಸಿವೆ. ಈಗವರು ಎರಡನೇ ಸುತ್ತಿನಲ್ಲಿ ಹೊಸ ಆಧಾರಗಳ ಅಡಿಯಲ್ಲಿ ಜಾಮೀನು ಕೋರಿದ್ದಾರೆ.

===

ಬಿಎಸ್‌ಎಫ್‌ ತಂತ್ರಾಂಶ ಕಳವು: ಜಾಮೀನು ತಿರಸ್ಕೃತ

ಬೆಂಗಳೂರು: ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಬಳಸುತ್ತಿರುವ ಹೈ-ಆಲ್ಟಿಟ್ಯೂಡ್‌ ಡ್ರೋನ್‌ಗಳ ವಿನ್ಯಾಸ ಮತ್ತು ಅದರ ತಂತ್ರಾಂಶ (ಸಾಫ್ಟವೇರ್‌) ಕಳವು ಮಾಡಿದ ಆರೋಪದಡಿ ಬಂಧನ ಭೀತಿ ಎದುರಿಸುತ್ತಿರುವ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.

ನಿರೀಕ್ಷಣಾ ಜಾಮೀನು ಕೋರಿ ನೊಯ್ಡಾದ ಪ್ರಭಾತ್‌ ಶರ್ಮ ಮತ್ತು ಬೆಂಗಳೂರಿನ ಯಲಹಂಕದ ಆಕಾಶ್‌ ಎಂ.ಪಾಟೀಲ್‌ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಗಳನ್ನು ನ್ಯಾಯಮೂರ್ತಿ ಪಿ.ಎಂ.ನವಾಜ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ತಿರಸ್ಕರಿಸಿ ಆದೇಶಿಸಿದೆ.

‘ಸೈಬರ್ ಆರ್ಥಿಕ ಅಪರಾಧಗಳಲ್ಲಿ ವಿಶೇಷವಾಗಿ ತಾಂತ್ರಿಕ ಸ್ವರೂಪ ಹೊಂದಿರುವ ಅಪರಾಧಗಳಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುವ ಅಗತ್ಯವಿರುತ್ತದೆ. ಇಂತಹ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ನೀಡುವಾಗ ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕಾಗುತ್ತದೆ. ಹೀಗಾಗಿ, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದರೆ ಅದು ತನಿಖೆಯ ಮೇಲೆ ದುಷ್ಪರಿಣಾಮ ಬೀರಬಹುದು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

====

Cut-off box - ಕೆಪಿಎಸ್‌ಸಿ: ಸಿಐಡಿ ಬಗೆದಿರುವ ಸತ್ಯವೆಷ್ಟು?  ಬೆಂಗಳೂರು: ‘ಕರ್ನಾಟಕ ಲೋಕಸೇವಾ ಆಯೋಗದಲ್ಲಿನ (ಕೆಪಿಎಸ್‌ಸಿ) ನೇಮಕಾತಿ ವಿಷಯಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಎಷ್ಟು ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಲಾಗಿದೆ ಮತ್ತು ವಹಿಸಲಾಗಿರುವ ಎಷ್ಟು ಪ್ರಕರಣಗಳಲ್ಲಿ ಸತ್ಯ ಹೊರಬಂದಿದೆ ಎಂಬ ಮಾಹಿತಿಯನ್ನು ಒದಗಿಸಿ’ ಎಂದು ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಸ್‌ಎಟಿ) ಆದೇಶ ಪ್ರಶ್ನಿಸಿ ಎಂಜಿನಿಯರ್‌ಗಳಾದ ವಿಶ್ವಾಸ್‌ ಮತ್ತಿತರರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಮತ್ತು ರಾಮಚಂದ್ರ ಡಿ. ಹುದ್ದಾರ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ‘ಆಯೋಗದ ನಿರ್ಣಯದ ಪ್ರಕಾರ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ. 10 ಮಂದಿ ಅರ್ಜಿದಾರರನ್ನು ನೇಮಕಾತಿಗೆ ಪರಿಗಣಿಸಬಾರದು ಎಂದು ಆಯೋಗದ ನಿರ್ಣಯದಲ್ಲಿ ಹೇಳಲಾಗಿತ್ತು. ಆದಾಗ್ಯೂ ಅವರಿಗೆ ನೇಮಕಾತಿ ಪತ್ರ ಏಕೆ ನೀಡಲಾಗಿದೆ ಎಂಬುದಕ್ಕೆ ಸಮರ್ಥನೆ ಒದಗಿಸಲಾಗುವುದು’ ಎಂದರು. ನ್ಯಾಯಪೀಠದ ನಿರ್ದಿಷ್ಟ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆಪಿಎಸ್‌ಸಿ ಪರ ಹಾಜರಿದ್ದ ಪದಾಂಕಿತ ಹಿರಿಯ ವಕೀಲ ಪಿ.ಎಸ್‌.ರಾಜಗೋಪಾಲ ಮತ್ತು ಪ್ರಕಾಶ್‌ ಅವರು ‘ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವ ಸಾಂವಿಧಾನಿಕ ಅಧಿಕಾರ ನ್ಯಾಯಪೀಠಕ್ಕೆ ಇದೆ’ ಎಂದರು. ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯಲ್ಲಿ (ಆರ್‌ಡಿಪಿಆರ್‌) ಕುಡಿಯುವ ನೀರು ಪೂರೈಕೆ ವಿಭಾಗದ ಸಹಾಯಕ ಕಾರ್ಯಕಾರಿ ಎಂಜಿನಿಯರ್‌ಗಳ (ಎಇಇ) ನೇಮಕದಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಕೆಪಿಎಸ್‌ಸಿ ಮಾಡಿರುವ ಶಿಫಾರಸಿಗೆ ತಡೆ ನೀಡಬೇಕು’ ಎಂಬ ಅರ್ಜಿದಾರರ ಮನವಿಯನ್ನು  ಕೆಎಸ್‌ಎಟಿ ತಿರಸ್ಕರಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.