ADVERTISEMENT

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಿರುದ್ಧ ಹೈಕೋರ್ಟ್ ಕಿಡಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 20:57 IST
Last Updated 26 ಜೂನ್ 2020, 20:57 IST
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌‌
ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌‌    

ಬೆಂಗಳೂರು: ತಮ್ಮ ಮತಕ್ಷೇತ್ರದ ವ್ಯಕ್ತಿಯೊಬ್ಬರಿಗೆ ಮಳಿಗೆ ತೆರೆಯಲು ಅನುಮತಿ ನೀಡುವಂತೆ ಸೂಚಿಸಿ ಎಂಎಸ್‍ಐಎಲ್‍ಗೆ ಶಿಫಾರಸು ಪತ್ರ ಬರೆದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌‌ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ‌ ಕುರಿತಂತೆ ಔರಾದ ತಾಲ್ಲೂಕು ಮುಧೋಳ-ಬಿ ಗ್ರಾಮದ ಸೋಮನಾಥ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಜಿ.ಕೆ. ಭಟ್, ಸಚಿವರ ಶಿಫಾರಸು ಪತ್ರವನ್ನು ನ್ಯಾಯಪೀಠಕ್ಕೆ ಹಾಜರು
ಪಡಿಸಿದರು.

ADVERTISEMENT

ಪತ್ರವನ್ನು ಪರಿಶೀಲಿಸಿದ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ‘ಇದು ಸಚಿವರು ಮಾಡುವ ಕೆಲಸವಲ್ಲ. ಅಧಿಕಾರ ದುರುಪಯೋಗಕ್ಕೆ ಇದೊಂದು ಸ್ಪಷ್ಟ ನಿದರ್ಶನ’ ಎಂದು ಕಿಡಿ ಕಾರಿತು.

‘ಸಚಿವರನ್ನೂ ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಿ’ ಎಂದು ಅರ್ಜಿದಾರರಿಗೆ ಸೂಚಿಸಿ, ರಾಜ್ಯ ಸರ್ಕಾರ, ಅಬಕಾರಿ ಆಯುಕ್ತರು, ಬೀದರ್ ಜಿಲ್ಲಾಧಿಕಾರಿ, ಜಿಲ್ಲಾ ಅಬಕಾರಿ ಆಯುಕ್ತ, ಎಂಎಸ್‍ಐಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತು. ಜುಲೈ 22ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಲಾಗಿದೆ.

‘ವಿಧಾನಸಭಾ ಕ್ಷೇತ್ರವಾರು ಕೋಟಾ ನಿಗದಿಪಡಿಸಿ ಮದ್ಯದಂಗಡಿ ತೆರೆಯಲು ಎಂಎಸ್‍ಐಎಲ್‍ಗೆ ಪರವಾನಗಿ ನೀಡುವ ಸಂಬಂಧ 2016ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.