ADVERTISEMENT

ಹೈಕೋರ್ಟ್‌ ವಿಡಿಯೊ ಕಾನ್ಫರೆನ್ಸ್‌: ತಾತ್ಕಾಲಿಕ ಸ್ಥಗಿತ

ಅಶ್ಲೀಲ ಚಿತ್ರ ಪ್ರದರ್ಶಿಸಿ ವಿಚಾರಣೆಗೆ ಅಡ್ಡಿ: ಎಫ್ಐಆರ್‌

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:12 IST
Last Updated 5 ಡಿಸೆಂಬರ್ 2023, 16:12 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಸೈಬರ್‌ ಭದ್ರತೆಯ ಕಾರಣದಿಂದ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಹೈಕೋರ್ಟ್‌ ಪೀಠಗಳ ವಿಡಿಯೊ ಕಾನ್ಫರೆನ್ಸ್‌ ಸೇವೆಯನ್ನು ಸದ್ಯಕ್ಕೆ ಅಮಾನತು ಮಾಡಲಾಗಿದೆ‘ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್ ಜನರಲ್‌ ಕೆ.ಎಸ್‌.ಭರತ್‌ ಕುಮಾರ್‌ ತಿಳಿಸಿದ್ದಾರೆ.

ಹೈಕೋರ್ಟ್‌ ಪ್ರಧಾನ ಪೀಠದಲ್ಲಿನ ಕೆಲವು ನ್ಯಾಯಪೀಠಗಳ ಕಲಾಪದಲ್ಲಿ ಸೋಮವಾರ ವಿಡಿಯೊ ಸ್ಟ್ರೀಮಿಂಗ್‌ ಖಾತೆಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿನ ಲೈವ್‌ ಸ್ಟ್ರೀಮಿಂಗ್‌ ಮತ್ತು ವಿಡಿಯೊ ಕಾನ್ಫರೆನ್ಸ್‌ ಅನ್ನು ನಿರ್ಬಂಧಿಸಲಾಗಿದೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಅವರು ಮಂಗಳವಾರ ಬೆಳಗ್ಗೆ ಮುಕ್ತ ನ್ಯಾಯಾಲಯದ ಕಲಾಪದಲ್ಲಿ ಈ ವಿಷಯವನ್ನು ಮೌಖಿಕವಾಗಿ ಪ್ರಸ್ತಾಪಿಸಿ, ‘ಇದೊಂದು ಅನಿರ್ಬಂಧಿತ ಪರಿಸ್ಥಿತಿಯಾಗಿದ್ದು ಸಹಕರಿಸಬೇಕು. ವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ‘ ಎಂದರು.

ADVERTISEMENT

ಎಫ್‌ಐಆರ್‌ ದಾಖಲು: ಬೆಂಗಳೂರಿನ ಪ್ರಧಾನ ಪೀಠದ ಹೈಕೋರ್ಟ್ ಹಾಲ್‌ ಸಂಖ್ಯೆ 6,12,18,23,24,26 ಮತ್ತು ಇತರೆ ಹಾಲ್‌ಗಳಲ್ಲಿ ಸೋಮವಾರ (ಡಿ.4) ವಿಡಿಯೊ ಕಾನ್ಫರೆನ್ಸ್‌ ಕಲಾಪ ನಡೆಯುತ್ತಿದ್ದಾಗ ಬೆಳಗಿನ 10 ಗಂಟೆಯಿಂದ 2 ಗಂಟೆಯ ಮಧ್ಯದಲ್ಲಿ ಲಿಂಕ್‌ ಮೂಲಕ ಭಾಗವಹಿಸಿದ್ದ ಅಪರಿಚಿತರು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ ವಿಚಾರಣೆಗೆ ಅಡ್ಡಿಪಡಿಸಿರುತ್ತಾರೆ‘ ಎಂದು ಆರೋಪಿಸಿ ಹೈಕೋರ್ಟ್‌ ಕಂಪ್ಯೂಟರ್ ವಿಭಾಗದ ರಿಜಿಸ್ಟ್ರಾರ್ ಎನ್‌.ಸುರೇಶ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಸಿಇಎನ್‌ ಠಾಣೆಯ ಬೆಂಗಳೂರು ಕೇಂದ್ರ ವಿಭಾಗದ ಠಾಣಾಧಿಕಾರಿ ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಕಲಂ 67 ಮತ್ತು 67 ಎ ಅಡಿಯಲ್ಲಿ ಅಪರಾಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.