ಹೈಕೋರ್ಟ್
ಬೆಂಗಳೂರು: ‘ಸ್ಥಿರಾಸ್ತಿಗೆ ಸಂಬಂಧಿಸಿದ ಸಿವಿಲ್ ಮತ್ತು ನಿರ್ದಿಷ್ಟ ಪರಿಹಾರ ಕೋರಿಕೆಯ ವ್ಯಾಜ್ಯಗಳಲ್ಲಿ ಅಸಲು ದಾವೆಗಳ ವಿಚಾರಣೆ ಅಂತಿಮ ಚರಣದಲ್ಲಿದ್ದಾಗ ಉದ್ದೇಶಪೂರ್ವಕವಾಗಿ ಹೊಸ ಹೊಸ ಮನವಿ ಹೊಂದಿದ ಅರ್ಜಿಗಳನ್ನು ಪೋಣಿಸುವ ಮೂಲಕ ಮೂಲ ದಾವೆಗೆ ವಿಳಂಬ ಉಂಟು ಮಾಡುವ ನಡೆ ಸಲ್ಲ’ ಎಂದು ಹೈಕೋರ್ಟ್ ತೀವ್ರ ಕಿಡಿ ಕಾರಿದೆ.
ಸ್ಥಿರಾಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣವೊಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠದಲ್ಲಿ ಸೋಮವಾರ ವಿಚಾರಣೆಗೆ ನಿಗದಿಯಾಗಿತ್ತು. ಈ ವೇಳೆ ನ್ಯಾಯಮೂರ್ತಿಗಳು, ಅರ್ಜಿದಾರರು ದಶಕಗಳಷ್ಟು ಹಳೆಯದಾದ ಅಸಲು ದಾವೆಯನ್ನು ಇನ್ನೂ ಬಗೆಹರಿಸಿಕೊಳ್ಳದೇ ಇರುವ ಬಗ್ಗೆ ಕಿಡಿ ಕಾರಿದರು.
‘ಈ ರೀತಿಯಲ್ಲಿ ಹೊಸ ಬೇಡಿಕೆಯ ಮೂಲಕ ವಿಳಂಬ ಧೋರಣೆ ಅನುಸರಿಸುವ ನಿಮ್ಮ ನಡೆ ಸರಿಯಲ್ಲ. ನಿರ್ದಿಷ್ಟ ಪರಿಹಾರ ಕೋರಿಕೆ ಮತ್ತು ಅಸಲು ದಾವೆಗಳು ಈ ರೀತಿಯ ಮಧ್ಯಂತರ ಅಥವಾ ಹೊಸ ಹೊಸ ರಿಟ್ ಅರ್ಜಿಗಳ ಮೂಲಕ ಹೈಕೋರ್ಟ್ ಮೆಟ್ಟಿಲೇರಿದರೆ ವಿಚಾರಣಾ ನ್ಯಾಯಾಲಯಗಳಲ್ಲಿನ ದಾವೆಗಳು ಬಗೆಹರಿಯುವುದು ಯಾವ ಕಾಲಕ್ಕೆ’ ಎಂದು ಖಾರವಾಗಿ ಪ್ರಶ್ನಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಆದೇಶ ಹೊರಡಿಸಿ ವಿಚಾರಣೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.