ADVERTISEMENT

ಕಾಲ್ಪನಿಕ ವೇತನ ಬಡ್ತಿ: ಉನ್ನತಮಟ್ಟದ ಸಭೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 16:15 IST
Last Updated 22 ಮಾರ್ಚ್ 2022, 16:15 IST

ಬೆಂಗಳೂರು: ಅನುದಾನಿತ ಶಿಕ್ಷಣ ಸಂಸ್ಥೆಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಸೇವಾ ಸೌಲಭ್ಯಗಳನ್ನು (ಕಾಲ್ಪನಿಕ ವೇತನ ಬಡ್ತಿ) ಒದಗಿಸಲು ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಭರವಸೆ ನೀಡಿದರು.

ವಿಧಾನಪರಿಷತ್‌ನಲ್ಲಿ ಮಂಗಳವಾರ ನಿಯಮ 330ರ ಅಡಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸರ್ಕಾರದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ಬಿಜೆಪಿಯ ಎಸ್‌.ವಿ. ಸಂಕನೂರ, ಶಶೀಲ್‌ ನಮೋಶಿ, ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ, ಮರಿತಿಬ್ಬೇಗೌಡ, ಎಸ್‌.ಎಲ್‌. ಭೋಜೇಗೌಡ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕಾಲ್ಪನಿಕ ವೇತನ ಬಡ್ತಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿದರು.

ಉತ್ತರ ನೀಡಿದ ಸಚಿವರು, ‘25,000 ನೌಕರರಿಗೆ ಕಾಲ್ಪನಿಕ ವೇತನ ಬಡ್ತಿ ನೀಡಬೇಕಾಗುತ್ತದೆ. ಇದಕ್ಕಾಗಿ ವಾರ್ಷಿಕ ₹ 351 ಕೋಟಿ ಆರ್ಥಿಕ ಹೊರೆ ಬೀಳುತ್ತದೆ. ಹಿಂಬಾಕಿ ಸೇರಿದಂತೆ ₹ 3,083 ಕೋಟಿ ಬೇಕಾಗುತ್ತದೆ. ಈ ವಿಷ
ಯಕ್ಕೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿದೆ. ಅಲ್ಲಿ ಇತ್ಯರ್ಥವಾದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದರು. ‘ಅಧಿಕಾರಿಗಳು ಸರ್ಕಾರವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ₹ 3,083 ಕೋಟಿ ಅಗತ್ಯವಿಲ್ಲ. ಯಾರೊಬ್ಬರೂ ಹಿಂಬಾಕಿ ಕೇಳುವುದಿಲ್ಲ. ₹ 351 ಕೋಟಿಯಲ್ಲೇ ವಿಷಯ ಇತ್ಯರ್ಥವಾಗುತ್ತದೆ. ತಕ್ಷಣ ನಿರ್ಧಾರ ಪ್ರಕಟಿಸಬೇಕು’ ಎಂದು ಸದಸ್ಯರು ಪಟ್ಟುಹಿಡಿದರು.

ADVERTISEMENT

ಮುಖ್ಯಮಂತ್ರಿ, ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ನ ಶಿಕ್ಷಕರ ಕ್ಷೇತ್ರ ಪ್ರತಿನಿಧಿಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಪ್ರತಿನಿಧಿಗಳ ಜತೆ ಉನ್ನತಮಟ್ಟದ ಸಭೆ ನಡೆಸಲಾಗುವುದು. ಅಲ್ಲಿಯೇ ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು. ಇದನ್ನು ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಬೆಂಬಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.