ADVERTISEMENT

ಕೆಎಂಸಿ: ಮರು ಚುನಾವಣೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 22:34 IST
Last Updated 14 ಜೂನ್ 2021, 22:34 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ (ಕೆಎಂಸಿ) ನಡೆದಿದ್ದ ಚುನಾವಣೆಯನ್ನು ರದ್ದುಪಡಿಸಿರುವ ಹೈಕೋರ್ಟ್, 6 ತಿಂಗಳಲ್ಲಿ ಮರು ಚುನಾವಣೆ ನಡೆಸಲು ಆದೇಶಿಸಿದೆ.

ಸಹಕಾರ ಸಂಘಗಳ ಜಂಟಿ ರಿಜಿಸ್ಟ್ರಾರ್ ಡಿ. ಪಾಂಡುರಂಗ ಗರಗ್ ವಿರುದ್ಧ ಶಿಸ್ತು ಕ್ರಮ ಪ್ರಕ್ರಿಯೆ ನಡೆಸುವಂತೆ ಲೋಕಾಯುಕ್ತಕ್ಕೆ ನಿರ್ದೇಶನ ನೀಡಿದೆ. ಗಚಿನಮನಿ ನಾಗನಾಥ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಈ ಆದೇಶ ನೀಡಿತು.

‘ಚುನಾವಣೆ ನಡೆಸಲು ನಾಲ್ಕು ವರ್ಷ ವಿಳಂಬ ಮಾಡಲಾಗಿದೆ. ಮತದಾರರ ಪಟ್ಟಿ ಅಂತಿಮಗೊಳಿಸುವಲ್ಲಿಯೂ ಲೋಪಗಳನ್ನು ಎಸಗಲಾಗಿದೆ. ಮೃತಪಟ್ಟವರು, ಸದಸ್ಯತ್ವ ಮರಳಿಸಿ ವಿದೇಶಕ್ಕೆ ಹೋದವರನ್ನು ಪಟ್ಟಿಯಲ್ಲಿ ಉಳಿಸಿಕೊಂಡು ಚುನಾವಣೆ ನಡೆಸಲಾಗಿದೆ. ಮತದಾರರ ಪಟ್ಟಿಯನ್ನು ಕೆಎಂಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸದೆ ಪ್ರತ್ಯೇಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದು ಅರ್ಜಿದಾರರು ಆರೋಪಿಸಿದ್ದರು.

ADVERTISEMENT

‘ಮತದಾರರ ಪಟ್ಟಿಗೆ ಸಲ್ಲಿಸಿದ್ದ ಸಾವಿರಾರು ಆಕ್ಷೇಪಣೆಗಳನ್ನು ಚುನಾವಣಾಧಿಕಾರಿ ಪರಿಗಣಿಸಿರಲಿಲ್ಲ’ ಎಂದು ದೂರಿದ್ದರು.

‘ಚುನಾವಣಾಧಿಕಾರಿಯ ಈ ಕ್ರಮಗಳು ಕಾನೂನುಬಾಹಿರ’ ಎಂದು ತಿಳಿಸಿದ ಪೀಠ, ಹೊಸ ಮತದಾರರ ಪಟ್ಟಿಯೊಂದಿಗೆ ಮರು ಚುನಾವಣೆ ನಡೆಸಲು ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.