ADVERTISEMENT

ಪ್ರೌಢಶಾಲೆ: ಶೇ 94.5 ಡಿಜಿಟಲ್‌ ಸಾಕ್ಷರತೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 15:54 IST
Last Updated 28 ಜನವರಿ 2025, 15:54 IST
   

ಬೆಂಗಳೂರು: ಕರ್ನಾಟಕ ಪ್ರೌಢಶಾಲೆಗಳ ಶೇ 94.5ರಷ್ಟು ಮಕ್ಕಳು ಡಿಜಿಟಲ್‌ ಸಾಕ್ಷರತೆಗೆ ತೆರೆದುಕೊಂಡಿದ್ದು, ಸ್ಮಾರ್ಟ್‌ಕ್ಲಾಸ್‌, ಆಂಗ್ಲ ಮಾಧ್ಯಮ ಅವಕಾಶಗಳಿಂದಾಗಿ ಸರ್ಕಾರಿ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಮಂಗಳವಾರ ಬಿಡುಗಡೆಯಾದ ಶಿಕ್ಷಣ ಸ್ಥಿತಿಗತಿಯ ವಾರ್ಷಿಕ ವರದಿ–2024 (ಎಎಸ್‌ಇಆರ್‌) ಹೇಳಿದೆ.

ನಗರ ಪ್ರದೇಶಗಳ ಕಲಿಕಾ ಗುಣಮಟ್ಟ ಸಾಕಷ್ಟು ಸುಧಾರಿಸಿದ್ದರೂ ಗ್ರಾಮೀಣ ಕರ್ನಾಟಕದ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 3ನೇ ತರಗತಿಯ ಶೇ 7.1 ಮಕ್ಕಳಿಗೆ ಒಂದೂ ಅಕ್ಷರ ಓದಲು ಬರುತ್ತಿಲ್ಲ. ಶೇ 21.5ರಷ್ಟು ಮಕ್ಕಳು ಒಂದನೇ ತರಗತಿಯ ಪಾಠ ಹಾಗೂ ಶೇ 15.9ರಷ್ಟು ಮಕ್ಕಳು ಎರಡನೇ ತರಗತಿಯ ಪಾಠವನ್ನಷ್ಟೇ ಓದಲು ಸಮರ್ಥರಿದ್ದಾರೆ. ಹಿಂದಿನ ಸಮೀಕ್ಷೆಗಳಿಗೆ ಹೋಲಿಸಿದರೆ ಈಗ ಕಲಿಕಾ ಸಾಮರ್ಥ್ಯದಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಎಂದು ಉಲ್ಲೇಖಿಸಲಾಗಿದೆ. 

ದಾಖಲಾತಿಯಲ್ಲಿ ಕುಸಿತ:

ADVERTISEMENT

ಸರ್ಕಾರಿ ಶಾಲೆಗಳಲ್ಲಿ 6ರಿಂದ 14 ವರ್ಷಗಳ ನಡುವಿನ ದಾಖಲಾತಿ ಕುಸಿದಿದೆ. 2022ರಲ್ಲಿ ಶೇ 76 ಇತ್ತು. ಅದು 2024ರಲ್ಲಿ ಶೇ 71ಕ್ಕೆ ಇಳಿಕೆಯಾಗಿದೆ. ಶೇ 83ರಷ್ಟು ಶಾಲೆಗಳು 60ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿವೆ. ಪೂರ್ವ ಪ್ರಾಥಮಿಕ ಹಂತದಲ್ಲಿ ನಾಲ್ಕು ವರ್ಷ ವಯಸ್ಸಿನ ಮಕ್ಕಳ ದಾಖಲಾತಿ ಪ್ರಮಾಣ ಶೇ 95 ದಾಟಿದೆ ಎಂದು ವರದಿ ವಿವರಿಸಿದೆ.

14ರಿಂದ 16ರ ವಯೋಮಾನದ ಶೇ 70ರಷ್ಟು ಮಕ್ಕಳು ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಸಕ್ರಿಯರಾಗಿದ್ದಾರೆ. ಶೇ 52ರಷ್ಟು ಮಕ್ಕಳು ಸಾಮಾಜಿಕ ಜಾಲತಾಣ ನಿರ್ವಹಿಸುವಷ್ಟು ಸಮರ್ಥರಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.