ADVERTISEMENT

ಕುಂದಾನಗರಿಯಲ್ಲಿ ಹೈಟೆಕ್‌ ಸರ್ಕಾರಿ ಶಾಲೆ: ಇಲ್ಲಿದೆ ಲ್ಯಾಬ್‌, ಇ–ಲೈಬ್ರರಿ

ಇಮಾಮ್‌ಹುಸೇನ್‌ ಗೂಡುನವರ
Published 10 ಜೂನ್ 2022, 20:02 IST
Last Updated 10 ಜೂನ್ 2022, 20:02 IST
ಬೆಳಗಾವಿಯ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೊರನೋಟ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿಯ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರಾಥಮಿಕ ಮತ್ತು ಪ್ರೌಢಶಾಲೆ ಹೊರನೋಟ/ ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ   

ಬೆಳಗಾವಿ: ಇಲ್ಲಿ ಎರಡು ಕಂಪ್ಯೂಟರ್‌ ಲ್ಯಾಬ್‌ಗಳಿವೆ. ಮಕ್ಕಳಲ್ಲಿ ಬೆರಗು ಮೂಡಿಸುವಂತಹ ಇ–ಲೈಬ್ರರಿಯಿದೆ. ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಭವ್ಯ ಆಡಿಟೋರಿಯಂ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ. ಸಾಲು–ಸಾಲಾಗಿ ಹೈಟೆಕ್‌ ಕಲಿಕಾ ಸೌಲಭ್ಯಗಳೂ ಇಲ್ಲಿವೆ...

ಅಷ್ಟಕ್ಕೂ ಇದು ಯಾವುದೋ ಪ್ರತಿಷ್ಠಿತ ಖಾಸಗಿ ಶಾಲೆ ಅಂದುಕೊಂಡರೆ ಈ ಊಹೆ ತಪ್ಪು. ಇದು ಶತಮಾನ ಕಂಡಿರುವ ಇಲ್ಲಿನ ಶಹಾಪುರದ ಸರ್ಕಾರಿ ಚಿಂತಾಮಣರಾವ್‌ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಚಿತ್ರಣ.

ಗಡಿಭಾಗದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿರುವ ಈ ದಿನಗಳಲ್ಲಿ, ಈ ಶಾಲೆ ಅಭಿವೃದ್ಧಿ ಕಂಡಿದೆ. ಗ್ರಾಮೀಣ ಭಾಗದ ಹಾಗೂ ಕೊಳೆಗೇರಿ ಪ್ರದೇಶದ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಶಾಲೆಯಲ್ಲಿ ಹೈಟೆಕ್‌ ಕಲಿಕಾ ಸೌಕರ್ಯಗಳನ್ನು ಸಿದ್ಧಗೊಳಿಸಲಾಗಿದೆ. ಪೆನ್ನು, ಚಾಕ್‌ಪೀಸ್‌, ಪೆನ್ಸಿಲ್‌ನಿಂದ ಬರೆಯುತ್ತ, ಪುಸ್ತಕ ಓದುತ್ತಿದ್ದ ಮಕ್ಕಳು, ಈಗ ಕಂಪ್ಯೂಟರ್‌, ಸ್ಮಾರ್ಟ್‌ಬೋರ್ಡ್‌, ಇ–ಲೈಬ್ರರಿ, ಪ್ರೊಜೆಕ್ಟರ್‌
ಹೀಗೆ ಹಲವು ಸಲಕರಣೆಗಳನ್ನು ಬಳಸಿ ಖುಷಿಪಡುತ್ತಿದ್ದಾರೆ.

ADVERTISEMENT

ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕಲಿತ ಶಾಲೆ ಇದು. ಈ ಅಭಿಮಾನಕ್ಕಾಗಿ ಅಭಯ ಅವರು ಮುಂಚೂಣಿಯಲ್ಲಿ ನಿಂತು ಶಾಲೆಯನ್ನು ಸ್ಮಾರ್ಟ್‌ ಮಾಡಿದ್ದಾರೆ. ಹಳೆಯ ವಿದ್ಯಾರ್ಥಿಗಳ ತಂಡ ಕಟ್ಟಿಕೊಂಡು ಹೊಸ ಕಟ್ಟಡವನ್ನೂ ಕಟ್ಟಿಸಿದ್ದಾರೆ. ವಾರಕ್ಕೊಮ್ಮೆಯಾದರೂ ಶಾಲೆಗೆ ಭೇಟಿ ನೀಡುವುದು ಈ ಶಾಸಕರ ರೂಢಿ.

ಶಾಲೆಯಲ್ಲಿ ಏನೇನಿದೆ?: ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಒಂದು ಕಂಪ್ಯೂಟರ್‌ ಲ್ಯಾಬ್‌, ಡಯಟ್‌ನಿಂದ ಟಾಲ್ಪ್‌ ಲ್ಯಾಬ್‌ ನಿರ್ಮಿಸಲಾಗಿದೆ. ಒಟ್ಟು 45 ಕಂಪ್ಯೂಟರ್‌ಗಳಿದ್ದು, ಪಾಠ ಮಾಡಲು ಶಿಕ್ಷಕರಿಗೆ ತರಬೇತಿಯನ್ನೂ ನೀಡಲಾಗಿದೆ. ಮಕ್ಕಳಿಗೆ ನಿತ್ಯವೂ ಕಂಪ್ಯೂಟರ್‌ ಶಿಕ್ಷಣ ನೀಡಲಾಗುತ್ತಿದೆ. ಸುಸಜ್ಜಿತ ತರಗತಿ ಕೊಠಡಿ, ಬಾಲಕ–ಬಾಲಕಿಯರು ಹಾಗೂ ಶಿಕ್ಷಕ ವೃಂದಕ್ಕೆ ಪ್ರತ್ಯೇಕ ಶೌಚಗೃಹ ವ್ಯವಸ್ಥೆ ಇದೆ. ಶಾಲೆಯಂಗಳದಲ್ಲಿ 400 ಜನರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇರುವ ಹೈಟೆಕ್‌ ಆಡಿಟೋರಿಯಂ ನಿರ್ಮಿಸಲಾಗಿದೆ.

237 ಮಕ್ಕಳ ವ್ಯಾಸಂಗ
ಮಹಾರಾಷ್ಟ್ರದ ಸಾಂಗ್ಲಿ ಸಂಸ್ಥಾನಿಕರಾಗಿದ್ದ ಶ್ರೀಮಂತ ರಾಜಸಾಹೇಬ್‌ ಚಿಂತಾಮಣರಾವ್‌ ಪಟವರ್ಧನ್‌ ಹಾಗೂ ಸರಸ್ವತಿ ಪಟವರ್ಧನ್‌ ಅವರು 1920ರಲ್ಲಿ ಈ ಶಾಲೆ ತೆರೆದರು. ಹಾಗಾಗಿ, ಇದಕ್ಕೆ ‘ಚಿಂತಾಮಣರಾವ್ ಶಾಲೆ’ ಎಂದೇ ಹೆಸರು ಇಡಲಾಗಿದೆ. ಕನ್ನಡ, ಮರಾಠಿ ಮತ್ತು ಉರ್ದು ಮಾಧ್ಯಮಗಳು ಸೇರಿ 6ರಿಂದ 10ನೇ ತರಗತಿಗಳಲ್ಲಿ 237 ಮಕ್ಕಳು ಕಲಿಯುತ್ತಿದ್ದಾರೆ. 18 ಶಿಕ್ಷಕರು ಇದ್ದಾರೆ. ಇದೇ ಶಾಲೆ ಆವರಣದಲ್ಲಿ ಸರ್ಕಾರಿ ಪಿಯು ಕಾಲೇಜುಗಳಿದ್ದು, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಲ್ಲಿ 700 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

*
ಶಾಸಕರ ನಿಧಿ, ಸ್ಮಾರ್ಟ್‌ಸಿಟಿ ಯೋಜನೆ ಮತ್ತಿತರ ಇಲಾಖೆಗಳ ಅನುದಾನ ಹಾಗೂ ಹಳೇ ವಿದ್ಯಾರ್ಥಿಗಳ ನೆರವಿನಿಂದ ಶಾಲೆ ಅಭಿವೃದ್ಧಿಪಡಿಸಲಾಗುತ್ತಿದೆ. ಈವರೆಗೆ ₹8 ಕೋಟಿಗೂ ಅಧಿಕ ಅನುದಾನ ಬಂದಿದೆ.
-ಅಭಯ ಪಾಟೀಲ, ಶಾಸಕ

*
ಶಾಸಕ ಅಭಯ ಪಾಟೀಲ ಪ್ರಯತ್ನದಿಂದ ನಮ್ಮ ಶಾಲೆಗೆ ಹೆಚ್ಚಿನ ಕಲಿಕಾ ಸೌಕರ್ಯಗಳು ಸಿಗುತ್ತಿವೆ. ಮಕ್ಕಳು ಖುಷಿಯಿಂದ ಓದು ಮುಂದುವರಿಸಿದ್ದಾರೆ
-ವಿದ್ಯಾ ಜೋಶಿ, ಮುಖ್ಯಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.