ADVERTISEMENT

ಬೇಗ್‌ ವಿರುದ್ಧ ಹೈಕಮಾಂಡ್‌ಗೆ ದೂರು

ಪಕ್ಷ ವಿರೋಧಿ ಚಟುವಟಿಕೆ– ಎಐಸಿಸಿ, ಕೆಪಿಸಿಸಿಗೆ ರಿಜ್ವಾನ್‌ ಪತ್ರ

​ಪ್ರಜಾವಾಣಿ ವಾರ್ತೆ
Published 22 ಮೇ 2019, 18:39 IST
Last Updated 22 ಮೇ 2019, 18:39 IST

ಬೆಂಗಳೂರು: ತಮ್ಮ ಮತ್ತು ಸಿದ್ದರಾಮಯ್ಯ ವಿರುದ್ಧ ಹಿರಿಯ ಶಾಸಕ ರೋಷನ್‌ ಬೇಗ್‌ ವಾಗ್ದಾಳಿ ನಡೆಸಿದ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ದೆಹಲಿಯಲ್ಲಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಸಲಹೆಯಂತೆ ಬುಧವಾರ ಬೆಳಿಗ್ಗೆ ದೆಹಲಿಗೆ ತೆರಳಿ, ಬೇಗ್‌ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಆಗಿರುವ ಧಕ್ಕೆ ಬಗ್ಗೆ ವರಿಷ್ಠರ ಬಳಿ ಹೇಳಿಕೊಂಡಿದ್ದಾರೆ. ಬೇಗ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ದಿನೇಶ್‌ ಒತ್ತಾಯಿಸಿದ್ದಾರೆ.

ರಿಜ್ವಾನ್‌ ಪತ್ರ: ‘ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಜೊತೆ ಕೈಜೋಡಿಸಿರುವ ರೋಷನ್‌ ಬೇಗ್, ಪಕ್ಷದ ಅಭ್ಯರ್ಥಿಯಾಗಿದ್ದ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೆಪಿಸಿಸಿ ಮತ್ತು ಎಐಸಿಸಿಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ, ವಿಧಾನಪರಿಷತ್‌ ಸದಸ್ಯರೂ ಆಗಿರುವ ರಿಜ್ವಾನ್‌ ಅರ್ಷದ್‌ ಪತ್ರ ಬರೆದಿದ್ದಾರೆ.

ADVERTISEMENT

‘ಬಿಜೆಪಿ ಕಡೆ ಬೇಗ್‌ ತೋರಿಸುತ್ತಿರುವ ಒಲವು ಹೊಸತೇನೂ ಅಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಈ ಹಿಂದೆಯೇ ನಾಯಕರ ಗಮನಕ್ಕೆ ತಂದಿದ್ದೇನೆ. ನನ್ನ ವಿರುದ್ಧದ ಅವರ ನಿಲುವಿನ ಹೊರತಾಗಿಯೂ ಕ್ಷೇತ್ರದಲ್ಲಿ ನನಗೆ ಜನ ಬೆಂಬಲ ವ್ಯಕ್ತವಾಗಿದೆ’ ಎಂದೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬೇಗ್‌ ಹೇಳಿಕೆಯನ್ನು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಕೆಪಿಸಿಸಿ, ಕಾರಣ ನೀಡುವಂತೆ ನೋಟಿಸ್‌ ನೀಡಿದೆ. ಆದರೆ, ಪತ್ರಕ್ಕೆ ಉತ್ತರಿಸುವುದಿಲ್ಲ ಎಂದು ಬೇಗ್‌ ಟ್ವೀಟ್‌ ಮಾಡಿದ್ದಾರೆ. ಆ ಮೂಲಕ, ರಾಜ್ಯ ನಾಯಕರ ವಿರುದ್ಧ ತೊಡೆ ತಟ್ಟಿದ್ದಾರೆ.

ಫಲಿತಾಂಶ ಬಂದ ಬಳಿಕ ಏನೂ ಆಗಬಹುದು

‘ಚುನಾವಣೆಯ ಫಲಿತಾಂಶ ಬಂದ ಬಳಿಕ ರಾಜ್ಯ ರಾಜಕೀಯದಲ್ಲಿ ಏನೇನು ಬದಲಾವಣೆಗಳಾಗುತ್ತದೆಯೋ ನೋಡಬೇಕು. ಭವಿಷ್ಯದಲ್ಲಿ ಏನೂ ಬೇಕಾದರೂ ಆಗಬಹುದು’ ಎಂದು ಚಿಕ್ಕಬಳ್ಳಾಪುರ ಕಾಂಗ್ರೆಸ್‌ ಶಾಸಕಡಾ. ಸುಧಾಕರ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಬುಧವಾರ ಮಾತನಾಡಿದ ಅವರು, ‘ಎಲ್ಲರನ್ನು ಪರಸ್ಪರ ಪ್ರೀತಿಯಿಂದ ಜೊತೆಗೆ ಕರೆದುಕೊಂಡು ಹೋದರೆ ಸಮ್ಮಿಶ್ರ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿರುತ್ತದೆ’ ಎಂದರು.

‘ಸರ್ಕಾರ ರಚನೆ ಸಂದರ್ಭದಲ್ಲಿ ಜೆಡಿಎಸ್– ಕಾಂಗ್ರೆಸ್‌ ಮೈತ್ರಿಯನ್ನು ‘ಅಪವಿತ್ರ ಮೈತ್ರಿ’ ಎಂದು ಹೇಳಿದ್ದೆ. ಆದರೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.